samachara
www.samachara.com
ರಾಜಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌ ಸಿಎಂ, ಸಚಿನ್‌ ಪೈಲಟ್‌ ಡಿಸಿಎಂ
ಸುದ್ದಿ ಸಾರ

ರಾಜಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌ ಸಿಎಂ, ಸಚಿನ್‌ ಪೈಲಟ್‌ ಡಿಸಿಎಂ

ಕಳೆದ 36 ಗಂಟೆಗಳಲ್ಲಿ ಗೆಹ್ಲೋಟ್ ಮತ್ತು ಪೈಲಟ್‌ ಜತೆ ಮೂರು ಸುತ್ತಿನ ಮಾತುಕತೆ ನಡೆಸಿ ರಾಹುಲ್‌ ಗಾಂಧಿ ತಮ್ಮ ತೀರ್ಮಾನವನ್ನು ಹೊರ ಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ‘ರಾಜಸ್ಥಾನ ಸಿಎಂ ಯಾರಾಗಲಿದ್ದಾರೆ’ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 67 ವರ್ಷದ ಹಿರಿಯ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹ್ಲೋಟ್‌ ಮರುಭೂಮಿಯ ನಾಡಿನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಯುವ ನಾಯಕ 41 ವರ್ಷದ ಸಚಿನ್‌ ಪೈಲಟ್‌ ಉಪ ಮುಖ್ಯಮಂತ್ರಿ ಹುದ್ದೆ ನಿಭಾಯಿಸಲಿದ್ದಾರೆ.

ಮಂಗಳವಾರದಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಪಾಲಿಗೆ ರಾಜಸ್ಥಾನ ಸಿಎಂ ಆಯ್ಕೆ ಕಗ್ಗಂಟಾಗಿತ್ತು. ಉಭಯ ನಾಯಕರು ರಾಜಸ್ಥಾನ ಸಿಎಂ ಹುದ್ದೆ ತಮಗೆ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಅದರಲ್ಲೂ ಗುರುವಾರದಿಂದ ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌ ಪರ ಪ್ರತಿಭಟನೆಗಳೂ ಹುಟ್ಟಿಕೊಂಡಿದ್ದವು. ಅವರ ಬೆಂಬಲಿಗರು ರಸ್ತೆಗಿಳಿದು ದಾಂಧಲೆ ನಡೆಸಲು ಆರಂಭಿಸಿದ್ದರು.

ಹೀಗಾಗಿ ರಾಹುಲ್‌ ಗಾಂಧಿ ಪಾಲಿಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿತ್ತು. ಈ ಕಾರಣಕ್ಕೆ ಮೇಲಿಂದ ಮೇಲೆ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ವಾದ್ರಾರನ್ನು ಜತೆಗಿಟ್ಟುಕೊಂಡು ರಾಹುಲ್‌ ಗಾಂಧಿ ಸಭೆಗಳನ್ನು ನಡೆಸಿದ್ದರು. ಇದೀಗ ಕಳೆದ 36 ಗಂಟೆಗಳಲ್ಲಿ ಉಭಯ ನಾಯಕರ ಜತೆ ಮೂರು ಸುತ್ತಿನ ಮಾತುಕತೆ ನಡೆಸಿ ರಾಹುಲ್‌ ಗಾಂಧಿ ತಮ್ಮ ತೀರ್ಮಾನವನ್ನು ಹೊರ ಹಾಕಿದ್ದಾರೆ. ಅವರ ತೀರ್ಮಾನದ ಪ್ರಕಾರ ಗೆಹ್ಲೋಟ್‌ ಹೆಸರು ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಗೆ ಅಂತಿಮಗೊಂಡಿದೆ. ನವದೆಹಲಿಯಲ್ಲಿ ಗೆಹ್ಲೋಟ್‌ ಮತ್ತು ಪೈಲಟ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಈ ಘೋಷಣೆ ಮಾಡಿದ್ದಾರೆ.

ತಮ್ಮ ನಿರ್ಧಾರ ಪ್ರಕಟಿಸುವ ಮುನ್ನ ಟ್ಟೀಟ್‌ ಮಾಡಿದ್ದ ರಾಹುಲ್‌ ಗಾಂಧಿ ಗೆಹ್ಲೋಟ್‌ ಮ್ತತು ಪೈಲಟ್‌ ಜತೆ ನಗುತ್ತಾ ನಿಂತಿರುವ ಫೋಟೋ ಹಾಕಿ ‘ಯುನೈಟೆಡ್‌ ಕಲರ್ಸ್‌ ಆಫ್‌ ರಾಜಸ್ಥಾನ್‌’ ಎಂದು ಪ್ರತಿಕ್ರಿಯೆ ನೀಡಿದ್ದರು. ಅವರ ಮಾತುಗಳನ್ನು ಬೆಂಬಲಿಸಿ ಪೈಲಟ್‌ ಪತ್ರಿಕಾಗೋಷ್ಠಿಯಲ್ಲಿ ಮಾತನ್ನಾಡಿದ್ದಾರೆ. ಸಿಎಂ ಹುದ್ದೆ ಸಿಗದ್ದಕ್ಕೆ ಯಾವುದೇ ಬೇಸರವನ್ನು ತೋರಿಸಿಕೊಳ್ಳದ ಅವರು, ಅಶೋಕ್‌ ಗೆಹ್ಲೋಟ್‌ ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಕ್ಕೆ ರಾಹುಲ್‌ ಗಾಂಧಿಯವರನ್ನು ಅಭಿನಂದಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಣ ತಂತ್ರಗಾರ, ಎರಡು ಬಾರಿಯ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆಯ್ಕೆ ಕಾಂಗ್ರೆಸ್‌ಗೆ ಲಾಭ ತರಲಿದೆ ಎಂದುಕೊಳ್ಳಲಾಗಿದೆ.

ಇನ್ನು ಗುರುವಾರ ಮಧ್ಯ ಪ್ರದೇಶಕ್ಕೆ ಕಮಲ್‌ನಾಥ್‌ರನ್ನು ರಾಹುಲ್‌ ಗಾಂಧಿ ಮುಖ್ಯಮಂತ್ರಿ ಹುದ್ದೆಗೆ ನೇಮಿಸಿದ್ದರು. ಇದೀಗ ಛತ್ತೀಸ್‌ಗಢ ಮುಖ್ಯಮಂತ್ರಿ ಆಯ್ಕೆ ಬಾಕಿ ಉಳಿದಿದೆ. ಇಲ್ಲಿ ವಿರೋಧ ಪಕ್ಷದ ನಾಯಕ ಟಿಎಸ್‌ ಸಿಂಗ್‌ ಡಿಯೋ ಮತ್ತು ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೇಲ್‌ ನಡುವೆ ಸಿಎಂ ಸ್ಥಾನಕ್ಕಾಗಿ ಸ್ಪರ್ಧೆ ಇದೆ. ಇವರಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನ ಎರಡೂ ರಾಜ್ಯಗಳಲ್ಲೂ ‘ಹಿರಿಯರಿಗೆ’ ಸಿಎಂ ಪಟ್ಟ ಕಟ್ಟಿರುವ ಕಾಂಗ್ರೆಸ್‌ ಹೈಕಮಾಂಡ್‌ ‘ಹಿರಿತನಕ್ಕೆ ಮನ್ನಣೆ’ ಎಂಬ ಪಕ್ಷದ ಸಂಪ್ರದಾಯವನ್ನು ಮುಂದುವರಿಸಿದೆ.