ಪಂಚ ರಾಜ್ಯ ಫಲಿತಾಂಶ: ಫೈನಲ್‌ ರಿಸಲ್ಟ್‌ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ?
ಸುದ್ದಿ ಸಾರ

ಪಂಚ ರಾಜ್ಯ ಫಲಿತಾಂಶ: ಫೈನಲ್‌ ರಿಸಲ್ಟ್‌ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ?

ಮೋದಿ ಅಲೆ, ರಾಮಮಂದಿರ, ಹಿಂದುತ್ವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರಣತಂತ್ರಗಳೆಲ್ಲವೂ ಸ್ಥಳೀಯ ಜಿದ್ದಾಜಿದ್ದಿಗೆ ಈಗ ಹಳೆಯ ಸರಕುಗಳಾಗಿವೆ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ನಿರೂಪಿಸಿದೆ.

ಮಂಗಳವಾರ ಹಗಲೂ ರಾತ್ರಿ ಗಜಪ್ರಸವದಂತೆ ಸಾಗಿದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬುಧವಾರ ಬೆಳಿಗ್ಗೆ ಅಂತಿಮಗೊಂಡಿದೆ. ಬೆಳಿಗ್ಗೆ 8.30ರ ಹೊತ್ತಿಗೆ ಐದೂ ರಾಜ್ಯಗಳ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ತಾನಗಳಲ್ಲಿ ಬಿಜೆಪಿ ಸೋಲೊಪ್ಪಿಕೊಂಡಿದೆ. ತೆಲಂಗಾಣ ಮತ್ತು ಮಿಝೋರಾಂಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೇರಿವೆ.

ಮಂಗಳವಾರ ರಾತ್ರಿ ಇಡೀ ನಡೆದ ಮಧ್ಯಪ್ರದೇಶ ಫಲಿತಾಂಶದ ಹಗ್ಗಜಗ್ಗಾಟ ಬೆಳಗಿನ ಜಾವದ ವೇಳೆಗೆ ಬಹುತೇಕ ಸ್ಪಷ್ಟವಾಗಿತ್ತು. ಅಂತಿಮವಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 114 ಸ್ಥಾನಗಳನ್ನು ಪಡೆದರೆ, ಬಿಜೆಪಿ 109 ಸ್ಥಾನಗಳನ್ನು ಪಡೆದಿದೆ. ಬಿಎಸ್‌ಪಿ 2 ಸ್ಥಾನ, ಸಮಾಜವಾದಿ ಪಕ್ಷ 1 ಮತ್ತು ಇತರರು 4 ಸ್ಥಾನಗಳನ್ನು ಗೆದ್ದಿದ್ದಾರೆ. ಬಿಎಸ್‌ಪಿ ಕಾಂಗ್ರೆಸ್‌ಗೆ ತನ್ನ ಬೆಂಬಲ ಘೋಷಿಸಿರುವುದರಿಂದ ಕೈ ಪಕ್ಷಕ್ಕೆ ಎದುರಾಗಿದ್ದ ಬಹುಮತ ಕೊರತೆ ದೂರವಾಗಿದೆ.

ರಾಜಸ್ತಾನದಲ್ಲಿ ಕಾಂಗ್ರೆಸ್‌ 99 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 73 ಸ್ಥಾನಗಳನ್ನು ಪಡೆಯಲು ಮಾತ್ರ ಸಫಲವಾಗಿದೆ. ಬಿಎಸ್‌ಪಿ 6, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 3, ಸಿಪಿಐ(ಎಂ) 2, ಭಾರತೀಯ ಟ್ರೈಬಲ್‌ ಪಾರ್ಟಿ 2, ರಾಷ್ಟ್ರೀಯ ಲೋಕ ದಳ 1 ಮತ್ತು ಇತರರು 13 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ 68 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಬಿಜೆಪಿ ಸಂಖ್ಯೆ 15 ಸ್ಥಾನಗಳಿಗೆ ಕುಗ್ಗಿದೆ. ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ (ಜೆ) ಪಕ್ಷ 5 ಹಾಗೂ ಬಿಎಸ್‌ಪಿ 2 ಕ್ಷೇತ್ರಗಳಲ್ಲಿ ಗೆದ್ದಿವೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿದ್ದ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್‌ ವಿಜಯದ ಪತಾಕೆ ಹಾರಿಸಿದೆ.

Also read: ಪಂಚ ರಾಜ್ಯಗಳ ಫಲಿತಾಂಶ: ಹೇಳದೆ ಉಳಿದ ಆಯಾಮಗಳು ಹೀಗಿವೆ...

ತೆಲಂಗಾಣದಲ್ಲಿ ಟಿಆರ್‌ಎಸ್‌ 88 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್‌ 19 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಕೇವಲ 1 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಓವೈಸಿಯ ಎಐಎಂಐಎಂ ಪಕ್ಷ 7, ತೆಲುಗು ದೇಶಂ ಪಕ್ಷ 2, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ 1 ಮತ್ತು ಇತರರು 1 ಸ್ಥಾನಗಳನ್ನು ಪಡೆದಿದ್ದಾರೆ.

Also read: ಮೊದಲ ಸೋಲನ್ನೇ ಕೊನೆ ಮಾಡಿಕೊಂಡ ‘ದುಬೈ ಶೇಖರ’; ಯಾರು ಈ ಕಲ್ವಕುಂಟ್ಲ ಚಂದ್ರಶೇಖರ ರಾವ್‌?

ಈಶಾನ್ಯ ಗಡಿಯ ಮಿಝೋರಾಂನಲ್ಲೂ ಜನತೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ. ಮಿಝೋ ನ್ಯಾಷನಲ್‌ ಫ್ರಂಟ್‌ ಭರ್ಜರಿ 26 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್‌ 5 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಇಲ್ಲೂ ಕೂಡಾ ಒಂದು ಸ್ಥಾನಕ್ಕಷ್ಟೇ ಸೀಮಿತವಾಗಿದೆ. ಇತರರು 8 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

Also read: ದಶಕದ ಬಳಿಕ ಮಿಝೋರಾಂ ಗೆದ್ದ ಎಂಎನ್‌ಎಫ್‌; ಗಡಿರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಖಭಂಗ ಯಾಕಾಯ್ತು?

ಸ್ಪರ್ಧಿಸಿದ ಐದು ರಾಜ್ಯಗಳ ಪೈಕಿ ಒಂದರಲ್ಲೂ ಗೆಲ್ಲದೇ ಇರುವುದು ಹಾಗೂ ಅಧಿಕಾರದಲ್ಲಿದ್ದ ರಾಜ್ಯಗಳಲ್ಲೇ ಸೋಲು ಕಂಡಿರುವುದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಮೋದಿ ಅಲೆ, ರಾಮಮಂದಿರ, ಹಿಂದುತ್ವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರಣತಂತ್ರಗಳೆಲ್ಲವೂ ಸ್ಥಳೀಯ ಜಿದ್ದಾಜಿದ್ದಿಗೆ ಈಗ ಹಳೆಯ ಸರಕುಗಳಾಗಿವೆ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ನಿರೂಪಿಸಿದೆ.