samachara
www.samachara.com
‘ನೋಟ್‌ ಬ್ಯಾನ್‌ ವಕ್ತಾರ’ ಶಕ್ತಿಕಾಂತ್‌ ದಾಸ್‌ ಆರ್‌ಬಿಐ ನೂತನ ಗವರ್ನರ್‌
ಸುದ್ದಿ ಸಾರ

‘ನೋಟ್‌ ಬ್ಯಾನ್‌ ವಕ್ತಾರ’ ಶಕ್ತಿಕಾಂತ್‌ ದಾಸ್‌ ಆರ್‌ಬಿಐ ನೂತನ ಗವರ್ನರ್‌

ಅನಾಣ್ಯೀಕರಣದ ನಂತರ ಕೇಂದ್ರ ಸರಕಾರದ ತೀರ್ಮಾನವನ್ನು ಸಮರ್ಥಿಸುವ ಕೆಲಸ ಮಾಡುತ್ತಿದ್ದ ದಾಸ್ ಕಪ್ಪು ಆರ್ಥಿಕತೆ ಕುಸಿಯಲಿದ್ದು ನಕಲಿ ನೋಟು ಕಡಿಮೆಯಾಗಲಿದೆ ಮತ್ತು ಡಿಜಿಟಲ್‌ ಪಾವತಿಗಳು ಹೆಚ್ಚಾಗಲಿವೆ ಎಂದಿದ್ದರು. 

ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಿಸಿಯ ನಡುವೆ ಕೇಂದ್ರ ಸರಕಾರ ಆರ್‌ಬಿಐಗೆ ನೂತನ ಗವರ್ನರ್ ನೇಮಕಗೊಳಿಸಿದೆ. ಮಾಜಿ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿ ಶಕ್ತಿಕಾಂತ ದಾಸ್‌ರನ್ನು ಮೂರು ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್‌ ಹುದ್ದೆಗೆ ನೇಮಕ ಮಾಡಲಾಗಿದೆ. ಆರ್‌ಬಿಐ ಗವರ್ನರ್‌ ಆಗಿದ್ದ ಊರ್ಜಿತ್‌ ಪಟೇಲ್‌ ಸೋಮವಾರ ಅಚ್ಚರಿಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೀಗ ದಾಸ್‌ ಬರಲಿದ್ದಾರೆ.

1980ರ ಬ್ಯಾಚ್‌ ಐಎಎಸ್‌ ಅಧಿಕಾರಿಯಾಗಿರುವ ದಾಸ್‌ ಮಾಜಿ ಆರ್ಥಿಕ ಕಾರ್ಯದರ್ಶಿಯೂ ಹೌದು. ಸದ್ಯ ಅವರು 15ನೇ ಹಣಕಾಸು ಆಯೋಗದ ಸದಸ್ಯರಾಗಿದ್ದರು. ಹೆಚ್ಚು ಕಡಿಮೆ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಅವರು 2016ರ ಅನಾಣ್ಯೀಕರಣದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದರು.

ಮೊದಲು ನರೇಂದ್ರ ಮೋದಿ ಸರಕಾರ ದಾಸ್‌ ಅವರನ್ನು ಹಣಕಾಸು ಇಲಾಖೆಯ ಕಂದಾಯ ವಿಭಾಗಕ್ಕೆ ಕರೆ ತಂದಿತ್ತು. ನಂತರ ಅವರನ್ನು ಆರ್ಥಿಕ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅನಾಣ್ಯೀಕರಣವನ್ನು ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆಯುತ್ತಿದ್ದ ಸರಣಿ ಪತ್ರಿಕಾಗೋಷ್ಠಿಗಳಲ್ಲಿ ಅವರು ಕೇಂದ್ರ ಸರಕಾರದ ತೀರ್ಮಾನವನ್ನು ಸಮರ್ಥಿಸುವ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರು ನೋಟು ನಿಷೇಧದಿಂದ ಕಪ್ಪು ಆರ್ಥಿಕತೆ ಕುಸಿಯಲಿದ್ದು ನಕಲಿ ನೋಟು ಕಡಿಮೆಯಾಗಲಿದೆ ಮತ್ತು ಡಿಜಿಟಲ್‌ ಪಾವತಿಗಳು ಹೆಚ್ಚಾಗಲಿವೆ ಎಂದಿದ್ದರು. ಇದರ ನಡುವೆಯೇ ಅವರು ಮೇ 2017ರಲ್ಲಿ ಆರ್ಥಿಕ ವ್ಯವಹಾರ ಇಲಾಖೆಯಿಂದ ನಿರ್ಗಮಿಸಿದ್ದರು.

ಇದೀಗ ಅವರು ನೇರವಾಗಿ ಕೇಂದ್ರ ಬ್ಯಾಂಕ್‌ನ ಚುಕ್ಕಾಣಿ ಹಿಡಿಯಲಿದ್ದಾರೆ. ಶಕ್ತಿಕಾಂತ್‌ ದಾಸ್‌ ನೇಮಕವನ್ನು ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಸ್ವಾಗತಿಸಿದ್ದಾರೆ. “ಶಕ್ತಿಕಾಂತ್‌ ದಾಸ್‌ ಆರ್ಥಿಕ ವ್ಯವಹಾರ ಇಲಾಖೆಯಲ್ಲಿ ಬಹಳ ಕಾಲ ಕೆಲಸ ಮಾಡಿದ್ದಾರೆ. ಅವರು ಉತ್ತಮ ಗವರ್ನರ್‌ ಆಗುತ್ತಾರೆ ಎಂಬ ನಂಬಿಕೆ ನನಗಿದೆ,” ಎಂದವರು ಬ್ಲೂಂಬರ್ಗ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಆಲೋಚನೆಯ ಪ್ರಕಾರ ಅವರು ರಿಸರ್ವ್‌ ಬ್ಯಾಂಕ್‌ ಮೇಲಿರುವ ನಂಬಿಕೆ ಮತ್ತು ಅದಕ್ಕಿರುವ ಸ್ವಾತಂತ್ರ್ಯವನ್ನು ಮುಂದುವರಿಸುತ್ತಾರೆ ಎಂದುಕೊಂಡಿದ್ದೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರ ಸ್ವೀಕರಿಸಲಿರುವ ದಾಸ್‌ ಇದೇ ಡಿಸೆಂಬರ್‌ 14ರ ಆರ್‌ಬಿಐ ಮಂಡಳಿ ಸಭೆಯಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಆರ್‌ಬಿಐನ ಮೀಸಲು ನಿಧಿ ಮತ್ತು ಬ್ಯಾಂಕ್‌ನ ಮಂಡಳಿಯ ಅಧಿಕಾರವಧಿಯ ಬಗ್ಗೆ ಚರ್ಚೆಯಾಗಲಿದೆ. ಈ ಎರಡೂ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಡೆಯನ್ನು ಊರ್ಜಿತ್‌ ಪಟೇಲ್‌ ವಿರೋಧಿಸಿದ್ದರು. ಇದೀಗ ನೂತನ ಗವರ್ನರ್‌ ಈ ಸಂಬಂಧ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಚಿತ್ರ ಕೃಪೆ: ದಿ ಡಾಲರ್‌ ಬಿಸಿನೆಸ್‌

Join Samachara Official. CLICK HERE