ಮೋದಿ ಅಹಂಕಾರದಿಂದ ರಾಹುಲ್‌ ಕಲಿತಿದ್ದೇನು?; ಸುದ್ದಿಗೋಷ್ಠಿಯಲ್ಲಿ ರಹಸ್ಯ ಬಿಚ್ಚಿಟ್ಟ ಕಾಂಗ್ರೆಸ್‌ ಅಧ್ಯಕ್ಷ
ಸುದ್ದಿ ಸಾರ

ಮೋದಿ ಅಹಂಕಾರದಿಂದ ರಾಹುಲ್‌ ಕಲಿತಿದ್ದೇನು?; ಸುದ್ದಿಗೋಷ್ಠಿಯಲ್ಲಿ ರಹಸ್ಯ ಬಿಚ್ಚಿಟ್ಟ ಕಾಂಗ್ರೆಸ್‌ ಅಧ್ಯಕ್ಷ

ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ 2019ರ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸವನ್ನು ರಾಹುಲ್‌ ಗಾಂಧಿ ವ್ಯಕ್ತಪಡಿಸಿದ್ದಾರೆ.

“ನಾನು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು 2014ರ ಚುನಾವಣೆಯಿಂದ ಕಲಿತಿದ್ದೇನೆ. ದೇಶದ ಜನರ ಸಮಸ್ಯೆಗಳನ್ನು ಆಲಿಸುವ ಮನಸ್ಸು ಮೋದಿಗಿಲ್ಲ. ವಿಪಕ್ಷಗಳ ಮಾತನ್ನು ಕೇಳುವ ಮನಸ್ಸು ಮೋದಿಗಿಲ್ಲ. ಜನರ ಬಳಿ ಹೋಗಿ ಅವರ ಕಷ್ಟ ಕೇಳುವ ಮನಸ್ಸು ಮೋದಿಗಿಲ್ಲ. ಅವರ ಆಡಳಿತಕ್ಕೆ ಮಾನವೀಯ ಸ್ಪಂದನೆಯೇ ಇಲ್ಲ. ಆದರೆ, ನಾನು ಮೋದಿ ಅವರ ಹಾಗೆ ಮಾಡಬಾರದು ಎಂಬುದನ್ನು ಕಲಿತಿದ್ದೇನೆ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ತುಂಬಿದ ದಿನವೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪರವಾಗಿ ಹೊರ ಬಿದ್ದಿರುವ ಬಗ್ಗೆ ಮಾತನಾಡಲು ದೆಹಲಿಯ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾತ್ರಿ ರಾಹುಲ್‌ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಮಾತನಾಡಿದ ರಾಹುಲ್‌, “ಕಾಂಗ್ರೆಸ್‌ ರಾಜಸ್ತಾನ ಮತ್ತು ಛತ್ತೀಸ್‌ಗಢದಲ್ಲಿ ಗೆದ್ದಿದೆ. ಮಧ್ಯಪ್ರದೇಶದಲ್ಲೂ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್‌ನ ಗೆಲುವು ದೇಶದ ಜನಸಾಮಾನ್ಯರ ಗೆಲುವು, ಪಕ್ಷದ ಕಾರ್ಯಕರ್ತರ ಗೆಲುವು” ಎಂದಿದ್ದಾರೆ.

“ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಕೃಷಿ ಬಿಕ್ಕಟ್ಟು ಹಾಗೂ ಭ್ರಷ್ಟಾಚಾರ ಬಿಜೆಪಿ ಸೋಲಿಗೆ ಕಾರಣ. ಈ ಸಮಸ್ಯೆಗಳೇ 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಲಿವೆ. ಮಧ್ಯಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ ಸಿದ್ಧಾಂತಗಳು ಕಾಂಗ್ರೆಸ್‌ ಪಕ್ಷದ ಸಿದ್ಧಾಂತಗಳಂತೆಯೇ ಇವೆ. ಆ ಪಕ್ಷಗಳ ಬೆಂಬಲ ನಮಗೇ ಸಿಗುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

“ಮೋದಿ ಯುವ ಜನರಿಗೆ ನೀಡಿದ್ದ ಉದ್ಯೋಗದ ಭರವಸೆ ಹುಸಿಯಾಗಿದೆ. ರೈತರ ಸಮಸ್ಯೆಗಳನ್ನು ಮೋದಿ ಪರಿಹರಿಸಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೆ ಎಂದು ಜನ ನಂಬಿದ್ದರು. ಆದರೆ, ಮೋದಿ ಖುದ್ದು ಭ್ರಷ್ಟ ಎಂಬುದು ಜನರಿಗೆ ಈಗ ಅರ್ಥವಾಗಿದೆ” ಎಂದಿದ್ದಾರೆ ರಾಹುಲ್‌.

“ಪ್ರಧಾನಮಂತ್ರಿಯನ್ನು ದೇಶದ ಜನರ ಸೇವೆಗಾಗಿ ಆಯ್ಕೆ ಮಾಡಲಾಗಿದೆ. ಆದರೆ, ಜನರ ಸಮಸ್ಯೆಗಳ ಬಗ್ಗೆ ಮೋದಿ ಗಂಭೀರವಾಗಿಲ್ಲ. ವಿಪಕ್ಷಗಳು ಗುರುತಿಸುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನೇ ಮೋದಿ ಮಾಡುತ್ತಿಲ್ಲ. ಇದೆಲ್ಲವೂ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರಿದೆ. ನಾವು ಈಗ ಬಿಜೆಪಿಯನ್ನು ಸೋಲಿಸಿದ್ದೇವೆ. 2019ರಲ್ಲೂ ನಾವು ಬಿಜೆಪಿಯನ್ನು ಸೋಲಿಸುವ ವಿಶ್ವಾಸವಿದೆ” ಎಂದು ರಾಹುಲ್‌ ತಿಳಿಸಿದ್ದಾರೆ.

“ಬಿಜೆಪಿಯವರು ಭಾರತವನ್ನು ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ನಾವು ಯಾರನ್ನೂ ಮುಕ್ತವಾಗಿಸುವ ಮಾತನ್ನಾಡುವುದಿಲ್ಲ. ನಾವು ಯಾರನ್ನೂ ದೇಶದಿಂದ ಹೊರ ಹಾಕುವ, ದೇಶದಿಂದ ಮುಕ್ತವಾಗಿಸುವ ಮಾತನ್ನಾಡುವುದಿಲ್ಲ. ಉದ್ಯೋಗ, ಕೃಷಿ, ಭ್ರಷ್ಟಾಚಾರ, ಆರ್ಥಿಕತೆ –ಇವೆಲ್ಲವೂ 2019ರಲ್ಲೂ ಚುನಾವಣಾ ವಿಷಯಗಳಾಗಲಿವೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸಾಲಮನ್ನಾ ಒಂದೇ ಮಾರ್ಗವಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ಸುಲಭವಿಲ್ಲ. ಅದೊಂದು ದೊಡ್ಡ ಸವಾಲು” ಎಂದು ರಾಹುಲ್‌ ಹೇಳಿದ್ದಾರೆ.