samachara
www.samachara.com
ನ್ಯಾಯಾಂಗಣದಿಂದ ರಾಜಕೀಯದಂಗಳಕ್ಕೆ ಪುಟಿದ ಮಲ್ಯ ಗಡಿಪಾರು ಪ್ರಕರಣದ ಚೆಂಡು
ಸುದ್ದಿ ಸಾರ

ನ್ಯಾಯಾಂಗಣದಿಂದ ರಾಜಕೀಯದಂಗಳಕ್ಕೆ ಪುಟಿದ ಮಲ್ಯ ಗಡಿಪಾರು ಪ್ರಕರಣದ ಚೆಂಡು

ಒಂದೊಮ್ಮೆ ಆಂತರಿಕ ಸಚಿವರು ಗಡಿಪಾರಿಗೆ ಆದೇಶ ನೀಡಿದರೂ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಇದೆ. ಹೈಕೋರ್ಟ್‌ನಲ್ಲಿ ತೀರ್ಪು ವಿರುದ್ಧ ಬಂದರೆ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಪ್ರಮುಖ ಬೆಳವಣಿಗೆಯಲ್ಲಿ ಉದ್ಯಮಿ ವಿಜಯ್‌ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ನೀಡಿದೆ. ಕಿಂಗ್‌ಫಿಷರ್‌ ಏರ್‌ಲೈನ್ಸ್‌ ನಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಅವರು ಭಾರತದ ಬ್ಯಾಂಕುಗಳಿಗೆ 9,000 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಹಾರಿದ್ದರು. ಅವರನ್ನು ಭಾರತಕ್ಕೆ ಕರೆತರುವ ಸಂಬಂಧ ಪ್ರಯತ್ನಗಳು ಜಾರಿಯಲ್ಲಿದ್ದವು. ಇದೀಗ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ಗಡಿಪಾರು ಪ್ರಕ್ರಿಯೆಯಲ್ಲಿ ಮಲ್ಯಗೆ ಮೊದಲ ಹಿನ್ನಡೆಯಾಗಿದೆ.

ಆದೇಶಕ್ಕೂ ಮೊದಲು ಮಲ್ಯ ರಾಜಕೀಯ ಕಾರಣಗಳಿಗೆ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಆದರೆ ವಾದ ತಳ್ಳಿ ಹಾಕಿದ ನ್ಯಾಯಧೀಶೆ ಎಮ್ಮಾ ಅರ್ಬತ್‌ನಾಟ್‌, “ರಾಜಕೀಯ ಅಭಿಪ್ರಾಯಗಳ ಕಾರಣಕ್ಕೆ ಮಲ್ಯ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಮತ್ತು ರಾಕೇಶ್‌ ಆಸ್ತಾನಾ ಭ್ರಷ್ಟರಾಗಿ ನಡೆದುಕೊಂಡರು ಎಂಬುದಕ್ಕೂ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಈ ವಾದವನ್ನು ಒಪ್ಪಲಾಗದು,” ಎಂದಿದ್ದಾರೆ.

ಬ್ರಿಟನ್‌ನಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕೆಳ ಹಂತದ ನ್ಯಾಯಾಲಯವಾಗಿದ್ದು, ನ್ಯಾಯಾಧೀಶರು ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಸೂಚಿಸಿ ಅಲ್ಲಿನ ಆಂತರಿಕ ಸಚಿವರಿಗೆ ಆದೇಶದ ಪ್ರತಿಯನ್ನು ಸಲ್ಲಿಸಿದ್ದಾರೆ. ಈಗ ಗಡಿಪಾರಿಗೆ ಸಚಿವರು ತೆಗೆದುಕೊಳ್ಳುವ ತೀರ್ಮಾನ ಪ್ರಾಮುಖ್ಯತೆ ಪಡೆದುಕೊಂಡಿದೆ.

ಬ್ರಿಟನ್‌ ಸರಕಾರದ ಜತೆ ಭಾರತ ಸರಕಾರ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರು ಭಾರತಕ್ಕೆ ಹಸ್ತಾಂತರವಾಗಲಿದ್ದಾರೆ ಎಂದುಕೊಳ್ಳಲಾಗಿದೆ. ಇದರ ನಡುವೆಯೂ ಅವರಿಗೆ ತೀರ್ಪು ಪ್ರಶ್ನಿಸಿ 14 ದಿನಗಳ ಒಳಗೆ ಲಂಡನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

ಒಂದೊಮ್ಮೆ ಆಂತರಿಕ ಸಚಿವರು ಗಡಿಪಾರಿಗೆ ಆದೇಶ ನೀಡಿದರೂ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಇದೆ. ಹೈಕೋರ್ಟ್‌ನಲ್ಲಿ ತೀರ್ಪು ವಿರುದ್ಧ ಬಂದರೆ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಹೀಗೆ ಗಡಿಪಾರನ್ನು ತಡೆಯಲು ಮಲ್ಯ ಅವರಿಗೆ ಇನ್ನೂ ಮೂರು ದಾರಿಗಳು ಬಾಕಿ ಉಳಿದಿವೆ.

ಆದೇಶಕ್ಕೂ ಮೊದಲ ಮತ್ತು ನಂತರ ಅವರು ತಾನು ಬ್ಯಾಂಕುಗಳಿಗೆ ಎಲ್ಲಾ ಹಣವನ್ನು ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಆದರೆ ಮೊದಲು ಕಿಂಗ್‌ಫಿಷರ್‌ ಸಿಬ್ಬಂದಿಗಳಿಗೆ ಸಂಬಳ ನೀಡುತ್ತೇನೆ ಎಂದು 62 ವರ್ಷದ ಮಲ್ಯ ತಿಳಿಸಿದ್ದಾರೆ.

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ನಷ್ಟಕ್ಕೆ ಗುರಿಯಾದ ಬೆನ್ನಿಗೆ ಬ್ಯಾಂಕುಗಳಿಗೆ ಸಾಲ ಕಟ್ಟುವುದನ್ನು ಬಾಕಿ ಉಳಿಸಿಕೊಳ್ಳಲು ಆರಂಭಿಸಿತ್ತು. ಇದರ ನಡುವೆ 2016ರಲ್ಲಿ ಬ್ಯಾಂಕುಗಳು ಒಂದೊಂದಾಗಿ ಸಾಲ ವಸೂಲಿಗೆ ನ್ಯಾಯಾಲಯದ ಮೆಟ್ಟಿಲು ಏರಲು ಆರಂಭಿಸಿದವು. ಮುಖ್ಯವಾಗಿ ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ಗೆ ಅವರು ಬಾಕಿ ಉಳಿಸಿಕೊಂಡ ಸಾಲ ಕೊರಳು ಸುತ್ತಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಅವರು ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು.

ಗಡಿಪಾರು ಪ್ರಕರಣದಲ್ಲಿ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತದನಂತರ ಅವರು ಜಾಮೀನು ಪಡೆದುಕೊಂಡಿದ್ದರು. ನಂತರ ವಿಚಾರಣೆ ವೇಳೆ ಭಾರತದ ಜೈಲುಗಳಲ್ಲಿ ಸರಿಯಾದ ಗಾಳಿ, ಬೆಳಕಿಲ್ಲ ಎಂದು ಹೇಳಿ ಗಡಿಪಾರಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಬಳಿಕ ಭಾರತ ಇಲ್ಲಿನ ಜೈಲಿನ ವಿಡಿಯೋವನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿತ್ತು. ಅರ್ಥರ್ ರಸ್ತೆಯಲ್ಲಿರುವ ಬರಾಕ್‌ 12 ಜೈಲಿನ ಚಿತ್ರಗಳನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು. ಜೈಲಿನ ವಿಡಿಯೋ, ಫೋಟೋಗಳನ್ನು ಪರಿಶೀಲನೆ ಮಾಡಿ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಆದೇಶದಿಂದ ಚುನಾವಣೆಯತ್ತ ತೆರಳುತ್ತಿರುವ ನರೇಂದ್ರ ಮೋದಿ ಸರಕಾರಕ್ಕೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಭಾರತದಿಂದ ಸಾಲಗಾರರು ವಿದೇಶಕ್ಕೆ ಪರಾರಿಯಾಗಲು ಸರಕಾರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದ್ದ ಹೊತ್ತಲ್ಲಿ ಈ ಆದೇಶ ಬಂದಿದ್ದು ಎನ್‌ಡಿಎ ಸರಕಾರದ ಪಾಲಿಗೆ ಪ್ರತ್ಯಸ್ತ್ರ ಸಿಕ್ಕಂತಾಗಿದೆ. ಆದರೆ ಇದಕ್ಕೆ ಬ್ರಿಟನ್‌ ಸಚಿವರ ಸಹಿ ಬೀಳುವುದುೂ ಮುಖ್ಯವಾಗಿದೆ. ಒಂದೊಮ್ಮೆ ಸಹಿ ಹಾಕಿದರೂ ಮಲ್ಯ ಮೇಲಿನ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸುವ ಎಲ್ಲಾ ಸಾಧ್ಯತೆಗಳಿದ್ದು ಅವುಗಳ ತೀರ್ಮಾನ ಗಡಿಪಾರಿನ ಭವಿಷ್ಯವನ್ನು ನಿರ್ಧರಿಸಲಿವೆ.