samachara
www.samachara.com
21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ
ಸುದ್ದಿ ಸಾರ

21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ

2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ 21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ದ ಸಭೆ ನಡೆಯುತ್ತಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಮಣಿಸಲು ವಿಪಕ್ಷಗಳು ಒಂದಾಗಿದ್ದು, ದೆಹಲಿಯಲ್ಲಿ ಒಗ್ಗಟ್ಟು ಪ್ರದರ್ಶನದ ಸಭೆ ನಡೆದಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಪಕ್ಷಗಳಿಗೂ ಸ್ವಾಗತ ಕೋರಿರುವ ವಿಪಕ್ಷಗಳ ಮುಖಂಡರು ಮಂಗಳವಾರದಿಂದ ಆರಂಭವಾಗುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ವೈಫಲ್ಯಗಳನ್ನು ಎತ್ತಿಹಿಡಿದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮುನ್ನಾ ದಿನ ಕರೆಯಲಾಗಿರುವ ಮಹಾಮೈತ್ರಿ ಸಭೆಯ ಆಹ್ವಾನಿತರ ಪಟ್ಟಿಯನ್ನು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮನ್‌ಮೋಹನ್‌ ಸಿಂಗ್‌, ಎಎಪಿಯ ಅರವಿಂದ್‌ ಕೇಜ್ರಿವಾಲ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಮುಲಾಯಂ ಸಿಂಗ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ಜಿಡಿಎಸ್‌ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ - ಹೀಗೆ ಆಹ್ವಾನಿತರ ಪಟ್ಟಿಯಲ್ಲಿ ವಿಪಕ್ಷಗಳ ಮುಖಂಡರ ಹೆಸರುಗಳಿವೆ.

ಆದರೆ, ಚಂದ್ರಬಾಬು ನಾಯ್ಡು ಸಿದ್ಧಪಡಿಸಿರುವ ಈ ಆಹ್ವಾನಿತರ ಪಟ್ಟಿಯಲ್ಲಿ ಕೆಲವು ಮುಖಂಡರು ಮಹಾಮೈತ್ರಿಯ ಸಭೆಗೆ ಗೈರಾಗಿದ್ದಾರೆ. ಬಿಎಸ್‌ಪಿಯ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಈ ಮಹಾಮೈತ್ರಿ ಸಭೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳುವವರೆಗೂ ಯಾವುದೇ ಪ್ರಮುಖ ನಿರ್ಧಾರಕ್ಕೆ ಬಾರದಿರಲು ಮಾಯಾವತಿ ಹಾಗೂ ಅಖಿಲೇಶ್‌ ಯಾದವ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಾಯಾವತಿ ಹಾಗೂ ಅಖಿಲೇಶ್‌ ಯಾದವ್‌ ಮೈತ್ರಿಯಿಂದ ಸದ್ಯಕ್ಕೆ ದೂರ ಉಳಿದರೂ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಕುಶ್ವಾಹ ವಿಪಕ್ಷಗಳ ಜತೆಗೆ ಕೈಜೋಡಿಸಿರುವುದು ಈ ಒಕ್ಕೂಟ ಹೊಸ ಬಲ ತುಂಬಿದಂತಾಗಿದೆ. ಉತ್ತರ ಪ್ರದೇಶದಿಂದ ಮಾಯಾವತಿ ಹಾಗೂ ಅಖಿಲೇಶ್‌ ಯಾದವ್‌ ಮೈತ್ರಿಗೆ ಬಾರದಿದ್ದರೂ ಉತ್ತರ ಪ್ರದೇಶದ ಉಪೇಂದ್ರ ಕುಶ್ವಾಹ ಆಡಳಿತ ಮೈತ್ರಿಕೂಟದಿಂದ ಹೊರ ಬಂದು ವಿಪಕ್ಷಗಳ ಕೂಟ ಸೇರಿರುವುದು ಮೈತ್ರಿಕೂಟದ ಬಲವನ್ನು ಸದ್ಯಕ್ಕಂತೂ ಹೆಚ್ಚಿಸಿದೆ.

ನೋಟು ರದ್ಧತಿಯ ನಂತರದ ಆರ್ಥಿಕ ಪರಿಣಾಮಗಳು ಹಾಗೂ ಜನ ಸಾಮಾನ್ಯರು ಎದುರಿಸಿದ ಸಮಸ್ಯೆಗಳು, ಸಿಬಿಐ ವಿವಾದ, ಗೋರಕ್ಷಣೆಯ ಹೆಸರಿನ ದಾಳಿಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ಮುಗಿಬೀಳಲು ಹಾಗೂ ಈ ಬಗ್ಗೆ ತಯಾರಿ ನಡೆಸಿಕೊಳ್ಳಲು ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

“ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೇಗೆ ಜನಾಭಿಪ್ರಾಯ ಮೂಡಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ” ಎಂದು ವಿಪಕ್ಷ ಮುಖಂಡರೊಬ್ಬರು ಹೇಳಿದ್ದಾರೆ.

“ಚುನಾವಣೆಗೂ ಮುನ್ನಾ ಯುಪಿಎ ಮೈತ್ರಿ ಕೂಟ ರಚಿಸಿಕೊಳ್ಳುವ ಸಂಬಂಧ ಎಲ್ಲಾ ಪ್ರಮುಖ ವಿಪಕ್ಷಗಳೂ ಒಲವು ತೋರಿವೆ ತೃಣಮೂಲ ಕಾಂಗ್ರೆಸ್‌ ಹಾಗೂ ಕಮ್ಯುನಿಸ್ಟ್‌ ಪಕ್ಷಗಳು ಇದಕ್ಕೆ ಈಗಾಗಲೇ ತಮ್ಮ ಬೆಂಬಲ ನೀಡಿವೆ. ಆದರೆ, ಬೇರೆ ಬೇರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳಲ್ಲಿ ಬಿಜೆಪಿ ವಿರೋಧಿ ಅಲೆ ಒಡೆಯದಂತೆ ನೋಡಿಕೊಳ್ಳಲು ಮಹಾಮೈತ್ರಿಕೂಟದ ಬಾಗಿಲನ್ನು ತೆರೆದಿಡಲು ಚಿಂತಿಸಲಾಗಿದೆ” ಎಂದು ಮತ್ತೊಬ್ಬ ವಿಪಕ್ಷ ಮುಖಂಡರು ತಿಳಿಸಿದ್ದಾರೆ.

ಬಿಜೆಪಿಯನ್ನು ಮಣಿಸಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು, 2019ರ ಲೋಕಸಭಾ ಚುನಾವಣೆಯಲ್ಲಿ ಯಾವೆಲ್ಲಾ ವಿಚಾರಗಳನ್ನು ಮುನ್ನೆಲೆಗೆ ತರಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಮುಖಂಡರು ನಿರ್ಧರಿಸಿದ್ದಾರೆ.

ಮಹಾಮೈತ್ರಿ ಸಭೆಯ ಬಗ್ಗೆ ಅಣಕವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ, “ಮೋದಿ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಮುನ್ನಾ ವಿಪಕ್ಷ ಒಕ್ಕೂಟವು ತನ್ನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ಘೋಷಿಸಲಿ” ಎಂದಿದ್ದಾರೆ.

ಆದರೆ, ಸೋಮವಾರ ಸಂಜೆಯ ಸಭೆಯಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಮುಖ್ಯವಾಗಿ ಅಧಿವೇಶನದಲ್ಲಿ ಬಿಜೆಪಿ ವೈಫಲ್ಯಗಳನ್ನು ಗುರಿಯಾಗಿಸಲು ಹಾಗೂ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಆಧಾರದಲ್ಲಿ ಬಿಜೆಪಿಯನ್ನು ಹಣಿಯುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.