‘ಧೂಮಪಾನಕ್ಕಿಂತ ಗಾಳಿ ಸೇವನೆಯೇ ಅಪಾಯಕಾರಿ’: ಮಾಲಿನ್ಯದ ಗಂಭೀರತೆ ಬಿಚ್ಚಿಟ್ಟ  ಅಧ್ಯಯನ 
ಸುದ್ದಿ ಸಾರ

‘ಧೂಮಪಾನಕ್ಕಿಂತ ಗಾಳಿ ಸೇವನೆಯೇ ಅಪಾಯಕಾರಿ’: ಮಾಲಿನ್ಯದ ಗಂಭೀರತೆ ಬಿಚ್ಚಿಟ್ಟ ಅಧ್ಯಯನ 

ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ರಾಜ್ಯಗಳ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಂಡಿದೆ. ಮುಖ್ಯವಾಗಿ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್‌, ದೆಹಲಿ, ಹರ್ಯಾಣ, ಪಂಜಾಬ್‌ ಹೆಚ್ಚಿನ ವಾಯು ಮಾಲಿನ್ಯವನ್ನು ಎದುರಿಸುತ್ತಿವೆ.

ಭಾರತದಲ್ಲಿ ವಾಯು ಮಾಲಿನ್ಯ ಮಿತಿ ಮೀರಿ ಬೆಳೆಯುತ್ತಿದೆ ಎಂಬುದಕ್ಕೆ ಮತ್ತೊಂದು ಹೊಸ ಅಧ್ಯಯನ ಕನ್ನಡಿ ಹಿಡಿದಿದೆ.

ದೇಶದ 8 ಜನರಲ್ಲಿ ಒಬ್ಬರು ವಾಯು ಮಾಲಿನ್ಯದಿಂದಲೇ ಸಾವಿಗೀಡಾಗುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಅಗತ್ಯವಾಗಿ ಸೇವಿಸುವ ಗಾಳಿ ಮಲಿನಗೊಂಡಿದೆ ಎಂದು ಸಂಶೋಧನೆ ಹೇಳಿದೆ. ಕಲುಷಿತ ಗಾಳಿ ಸೇವನೆ ಧೂಮಪಾನಕ್ಕಿಂತ ಹಾನಿಕಾರಕವಾಗಿದ್ದು, ಪ್ರತಿ ಮನುಷ್ಯನ ಆಯಸ್ಸನ್ನು 1.7 ವರ್ಷಗಳಷ್ಟು ಕಡಿತಗೊಳಿಸುತ್ತಿದೆ ಎಂಬುದಾಗಿ ಸಂಶೋಧನೆ ಹೇಳಿದೆ.

ಭಾರತದ 100ಕ್ಕೂ ಸಂಸ್ಥೆಗಳು ಸೇರಿ ‘ಇಂಡಿಯಾ ಸ್ಟೇಟ್‌ ಲೆವೆಲ್‌ ಡಿಸೀಸ್‌ ಬರ್ಡನ್‌ ಇನಿಶಿಯೇಟಿವ್‌’ ಎಂಬ ಅಧ್ಯಯನ ನಡೆಸಿದ್ದುರು. ಇದರ ವರದಿ ‘ದಿ ಲ್ಯಾನ್ಸೆಂಟ್‌ ಪ್ಲಾನೆಟೊರಿ ಹೆಲ್ತ್‌’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಅದರಲ್ಲಿ ಈ ಗಂಭೀರ ಮಾಹಿತಿಗಳು ಅಡಕವಾಗಿವೆ.

‘ಭಾರತದಲ್ಲಿ ವಾಯು ಮಾಲಿನ್ಯದಿಂದ ಅವಧಿಪೂರ್ವ ಸಾವಿಗೆ ತುತ್ತಾಗುವವರ ಸಂಖ್ಯೆ ಅಧಿಕವಾಗಿದ್ದು ಜಾಗತಿಕ ಸರಾಸರಿಗೆ ಹೋಲಿಸಿದರೆ ಇದು ಶೇಕಡಾ 26ರಷ್ಟು ಹೆಚ್ಚಾಗಿದೆ. 2017ರಲ್ಲಿ ಸಾವಿಗೀಡಾದ 70 ವರ್ಷದೊಳಗಿನ 12.4 ಲಕ್ಷ ಜನರಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ವಾಯು ಮಾಲಿನ್ಯದಿಂದಲೇ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ಹೇಳುತ್ತಿದೆ. ಒಂದೊಮ್ಮೆ ವಾಯು ಮಾಲಿನ್ಯದ ಪ್ರಮಾಣ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಟ್ಟಕ್ಕಿಂತ ಕಡಿಮೆ ಇದ್ದಲ್ಲಿ ಭಾರತೀಯರು ಹೆಚ್ಚುವರಿಯಾಗಿ 1.7 ವರ್ಷ ಬದುಕಲಿದ್ದಾರೆ’ ಎಂದು ಈ ವರದಿ ಹೇಳಿದೆ.

ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ರಾಜ್ಯಗಳ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಗೊಂಡಿದೆ ಎಂದು ವರದಿ ಹೇಳುತ್ತಿದೆ. ಅದರಲ್ಲೂ ಮುಖ್ಯವಾಗಿ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್‌, ದೆಹಲಿ, ಹರ್ಯಾಣ, ಪಂಜಾಬ್‌ನ ಜನರು ಹೆಚ್ಚಿನ ವಾಯು ಮಾಲಿನ್ಯವನ್ನು ಎದುರಿಸುತ್ತಿದ್ದಾರೆ.

“ಅಡುಗೆಗೆ ಗ್ಯಾಸ್‌ ಬಳಕೆ ಮೊದಲಾದ ಉಪಕ್ರಮಗಳಿಂದ ಮನೆಗಳಲ್ಲಿ ಮಾಲಿನ್ಯ ಕಡಿಮೆಯಾಗಿದೆ. ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ,’’ ಎಂದು ಸಂಶೋಧನೆಯ ಕಾರ್ಯದರ್ಶಿ ಡಾ. ಬಲ್ರಾಮ್‌ ಭಾರ್ಗವ ಹೇಳಿದ್ದಾರೆ. ವಾಯು ಮಾಲಿನ್ಯ ಭಾರತದಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗಳಲ್ಲದೆ ಸಕ್ಕರೆ ಖಾಯಿಲೆ ಮೊದಲಾದವುಗಳಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎನ್ನುತ್ತಾರೆ ಪ್ರೊಫೆಸರ್‌ ಕ್ರಿಸ್ಟೋಫರ್‌ ಮರ್ರೆ.

‘ವಿಶ್ವ ಆರೋಗ್ಯ ಸಂಸ್ಥೆ’ಯ ಪ್ರಕಾರ ಜಗತ್ತಿನ 15 ಮಾಲಿನ್ಯಕಾರಕ ನಗರಗಳಲ್ಲಿ 14 ಭಾರತದಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಸಂಶೋಧಕರು, ‘ಮೆಕ್ಸಿಕೋ ನಗರ ಮತ್ತು ಬೀಜಿಂಗ್‌ನಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ಭಾರತದ ನಗರಗಳೂ ಅನುಸರಿಸಬೇಕು. ಹೊಗೆ ಹೊರಸೂಸುವಿಕೆಗೆ ನಿಯಂತ್ರಣ, ಸಾರ್ವಜನಿಕ ಸಾರಿಗೆಗೆ ಉತ್ತೇಜನದಂಥ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ಒಂದಷ್ಟು ವಾಯು ಮಾಲಿನ್ಯವನ್ನು ಕಡಿತಗೊಳಿಸಬಹುದು’ ಎಂದು ಸಲಹೆ ನೀಡಿದ್ದಾರೆ.