ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ವ್ಯವಸ್ಥಿತ ಸಂಚು: ಯೋಗಿ ಸಂಪುಟದ ಸಚಿವರ ಆರೋಪ!
ಸುದ್ದಿ ಸಾರ

ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ವ್ಯವಸ್ಥಿತ ಸಂಚು: ಯೋಗಿ ಸಂಪುಟದ ಸಚಿವರ ಆರೋಪ!

ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ‘ಶಾಂತಿ ಭಂಗಗೊಳಿಸುವ ಪ್ರಯತ್ನ’ ಎಂದು ಉತ್ತರ ಪ್ರದೇಶದ ಸಚಿವ ಓ.ಪಿ. ರಾಜ್‌ಭರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓರ್ವ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರನ್ನು ಬಲಿ ಪಡೆದ ಉತ್ತರ ಪ್ರದೇಶದ “ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ.” - ಹೀಗಂತ ಸ್ವತಃ ಯೋಗಿ ಆದಿತ್ಯನಾಥ್‌ ಸಂಪುಟದ ಸಚಿವರು ಹೇಳಿದ್ದಾರೆ.

‘ಎಎನ್‌ಐ’ ಸುದ್ದಿ ಸಂಸ್ಥೆಯ ಜತೆ ಮಾತನಾಡಿರುವ ಅವರು, “ಇದು ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಮತ್ತು ಆರ್‌ಎಸ್‌ಎಸ್‌ನ ಪೂರ್ವ ನಿಯೋಜಿತ ಸಂಚು. ಇದೀಗ ಪೊಲೀಸರು ಕೆಲವು ಬಿಜೆಪಿ ನಾಯಕರ ಹೆಸರನ್ನೂ ಹೇಳುತ್ತಿದ್ದಾರೆ. ಮುಸ್ಲಿಮರ ಇಜ್ತೆಮಾ ಆಚರಣೆಯಂದೇ ಯಾಕೆ ಈ ಪ್ರತಿಭಟನೆ ನಡೆಯಿತು,” ಎಂದು ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಪ್ರಶ್ನಿಸಿದ್ದಾರೆ. ಪ್ರತಿಭಟನೆ ನಡೆದ ಸಮಯ ಮತ್ತು ಅದರ ಹಿನ್ನೆಲೆಯನ್ನು ಇಟ್ಟುಕೊಂಡು ‘ಇದು ಶಾಂತಿ ಭಂಗಗೊಳಿಸುವ ಪ್ರಯತ್ನ’ ಎಂದು ಅವರು ಕಿಡಿಕಾರಿದ್ದಾರೆ.

ಸಚಿವ ಓ.ಪಿ. ರಾಜ್‌ಭರ್‌
ಸಚಿವ ಓ.ಪಿ. ರಾಜ್‌ಭರ್‌
/ಇಂಡಿಯನ್‌ ಲೆಟರ್‌

ರಾಜ್‌ಭರ್‌ ಬಿಜೆಪಿಯ ಮೈತ್ರಿ ಪಕ್ಷ ಸುಹಲ್‌ದೇವ್‌ ಭಾರ್ತಿ ಸಮಾಜ್‌ ಪಾರ್ಟಿಯ ಅಧ್ಯಕ್ಷರಾಗಿದ್ದು ಯೋಗಿ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾರೆ. ಸ್ವತಃ ಅವರೇ ಇದೀಗ ಸಂಘ ಪರಿವಾರವನ್ನು ಟೀಕಿಸಿದ್ದು ಕೇಸರಿ ಪಾಳಯನ್ನು ಮುಜುಗರದಲ್ಲಿ ಕೆಡವಿದೆ.

ರಾಜ್‌ಭರ್‌ ಬಿಜೆಪಿಯ ನಡೆಗಳನ್ನು ಟೀಕಿಸುವುದು ಇದೇ ಮೊದಲೇನೂ ಅಲ್ಲ. ಕೆಲವೇ ದಿನಗಳ ಹಿಂದೆ ಅವರು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಮುನಿಸಿಕೊಂಡಿದ್ದರು. ಹನುಮಂತ ದಲಿತ ಎಂಬ ಯೊಗಿ ಹೇಳಿಕೆಯನ್ನು ವಿರೋಧಿಸಿದ್ದ ಅವರು ದೇವರನ್ನು ಜಾತಿ ಹೆಸರಿನಲ್ಲಿ ವಿಭಜಿಸುವುದು ತಪ್ಪು ಎಂದಿದ್ದರು. “ದೇವರನ್ನು ಜಾತಿಗಳ ಹೆಸರಿನಲ್ಲಿ ವಿಭಾಗಿಸುವುದು ತಪ್ಪು. ಈ ವಿವಾದದ ಮೂಲಕ ದಲಿತ ಸಮುದಾಯವೀಗ ಹನುಮಾನ್‌ ದೇವಸ್ಥಾನಗಳನ್ನು ತಮ್ಮ ಕೈಗೆ ನೀಡಬೇಕು ಎಂಬ ಬೇಡಿಕೆ ಇಡುತ್ತಿದೆ,” ಎಂದಿದ್ದರು. ಈ ಮೂಲಕ ಆದಿತ್ಯನಾಥ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

Also read: ಅಖ್ಲಾಕ್‌ ಪ್ರಕರಣದ ತನಿಖಾಧಿಕಾರಿ ಹತ್ಯೆ; ಕೊಲೆ ಹಿಂದಿರುವುದು ಬಜರಂಗ ದಳ?