ಶಾಸಕ-ಸಂಸದರ ವಿರುದ್ಧ 4,122 ಕ್ರಿಮಿನಲ್‌ ಕೇಸ್‌; ಸುಪ್ರೀಂಗೆ ಸಲ್ಲಿಕೆಯಾಗಿದೆ ಬಿಗ್‌ ಡೇಟಾ!
ಸುದ್ದಿ ಸಾರ

ಶಾಸಕ-ಸಂಸದರ ವಿರುದ್ಧ 4,122 ಕ್ರಿಮಿನಲ್‌ ಕೇಸ್‌; ಸುಪ್ರೀಂಗೆ ಸಲ್ಲಿಕೆಯಾಗಿದೆ ಬಿಗ್‌ ಡೇಟಾ!

ದೇಶದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ 4,122 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ ಎಂಬ ಮಾಹಿತಿ ಸುಪ್ರೀಂಕೋರ್ಟ್‌ನಿಂದ ಬೆಳಕಿಗೆ ಬಂದಿದೆ.

ಕಳೆದ ಮೂರು ದಶಕಗಳಿಂದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ 4,122 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ. ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ನ್ಯಾಯಪೀಠದ ಮುಂದೆ ಬಂದಿದೆ.

ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ಆರೋಪ ಸಾಬೀತಾದರೆ ಅವರು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಹಾಗೂ ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗಳಲ್ಲಿ ಹಾಲಿ ಹಾಗೂ ಮಾಜಿ ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ಪಡೆಯಲು ಸುಪ್ರೀಂಕೋರ್ಟ್‌ ಅಮಿಕಸ್‌ ಕ್ಯೂರಿಯೊಬ್ಬರನ್ನು ನೇಮಿಸಿತ್ತು.

ನ್ಯಾಯಪೀಠಕ್ಕೆ ಅಮಿಕಸ್‌ ಕ್ಯೂರಿಯಾಗಿ ನೇಮಕವಾಗಿದ್ದ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ದೇಶದಾದ್ಯಂತ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ಸಂಗ್ರಹಿಸಿದ್ದರು. ಈ ಪ್ರಕ್ರಿಯೆಯಲ್ಲಿ ವಕೀಲೆ ಸ್ನೇಹಾ ಕಲಿತಾ ಎಂಬುವರು ವಿಜಯ್‌ ಅವರಿಗೆ ಸಹಾಯಕಿಯಾಗಿದ್ದರು.

ಸಂಗ್ರಹಿಸಿದ ಈ ಮಾಹಿತಿಯನ್ನು ಅಮಿಕಸ್‌ ಕ್ಯೂರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ ಮಾಹಿತಿಯ ಪ್ರಕಾರ ನಾಲ್ಕು ಸಾವಿರಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿವೆ.

4,122 ಕ್ರಿಮಿನಲ್‌ ಪ್ರಕರಣಗಳ ಪೈಕಿ 264 ಪ್ರಕರಣಗಳಿಗೆ ವಿವಿಧ ಹೈಕೋರ್ಟ್‌ಗಳು ತಡೆ ನೀಡಿವೆ. 1991ರಿಂದ ಬಾಕಿ ಇರುವ ಹಲವು ಪ್ರಕರಣಗಳು ಇತ್ಯರ್ಥಗೊಂಡಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಈ ಮಾಹಿತಿ ಬಹಿರಂಗಗೊಳಿಸಿದೆ.