samachara
www.samachara.com
‘ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿದೆ’; ಮಂದಿರ ನಿರ್ಮಾಣಕ್ಕೀಗ ಸುಗ್ರೀವಾಜ್ಞೆ ಅಸಾಧ್ಯ ಎಂದ ಬಿಜೆಪಿ
ಸುದ್ದಿ ಸಾರ

‘ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿದೆ’; ಮಂದಿರ ನಿರ್ಮಾಣಕ್ಕೀಗ ಸುಗ್ರೀವಾಜ್ಞೆ ಅಸಾಧ್ಯ ಎಂದ ಬಿಜೆಪಿ

“ರಾಮ ಮಂದಿರದ ವಿಚಾರವನ್ನು ಮುಂದಿಟ್ಟುಕೊಂಡು ನಾವು ಜನರ ಬಳಿ ಮತ ಕೇಳಲು ಹೋಗುವುದಿಲ್ಲ. ನಮ್ಮ ಅಜೆಂಡಾ  ‘ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌’” ಎಂದಿದೆ ಬಿಜೆಪಿ.

Team Samachara

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂದು ವಿಎಚ್‌ಪಿ ಹಾಗೂ ಹಿಂದೂ ಸಂಘಟನೆಗಳು ರಾಷ್ಟ್ರದಾದ್ಯಂತ ಶೋಭಾ ಯಾತ್ರೆ, ಜನಾಗ್ರಹ ಸಭೆಯ ಹೆಸರಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಿವೆ. ಆದರೆ, ನ್ಯಾಯಾಲಯದಲ್ಲಿರುವ ಅಯೋಧ್ಯೆಯ ವಿವಾದದಲ್ಲಿ ಅವಸರದ ನಿರ್ಧಾರ ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.

“ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ ರಾಮ ಮಂದಿರ ನಿರ್ಮಾಣದ ಬಗ್ಗೆ ಸದ್ಯಕ್ಕೆ ಸುಗ್ರೀವಾಜ್ಞೆ ಸಾಧ್ಯವಿಲ್ಲ. ಈ ಬಗ್ಗೆ ಬಿಜೆಪಿ ಅವಸರದ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯ್‌ವರ್ಗೀಯ ಹೇಳಿದ್ದಾರೆ.

“ರಾಮ ಮಂದಿರ ನಿರ್ಮಾಣ ಆಗುವುದಾದರೆ ಅದು ಬಿಜೆಪಿಯಿಂದ ಮಾತ್ರ. ಬಿಜೆಪಿಗಲ್ಲದೆ ಮಂದಿರ ನಿರ್ಮಾಣದ ಧೈರ್ಯ ಬೇರೆ ಯಾರಿಗೂ ಇಲ್ಲ” ಎಂದಿರುವ ಕೈಲಾಸ್‌, “ಮಂದಿರ ನಿರ್ಮಾಣ ವಿಚಾರವನ್ನು ವಿಪಕ್ಷಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ. ಹೀಗಾಗಿ ಈ ವಿಚಾರದಿಂದ ಬಿಜೆಪಿಗೆ ಲಾಭಕ್ಕಿಂತ ಹೆಚ್ಚು ಹಾನಿಯೇ ಆಗಿದೆ” ಎಂದಿದ್ದಾರೆ.

“ವಿವಾದ ಸದ್ಯ ನ್ಯಾಯಾಲಯದಲ್ಲಿದೆ. ಒಂದು ವೇಳೆ ಜನರ ಆಗ್ರಹ ಹೆಚ್ಚಾದರೆ ಮಂದಿರ ನಿರ್ಮಾಣದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಮಂದಿರ ನಿರ್ಮಾಣದ ಬಗ್ಗೆ ಸುಗ್ರೀವಾಜ್ಞೆ ಹೊರಡಿಬೇಕೆಂಬ ಬಗ್ಗೆ ಪಕ್ಷ ಯಾವುದೇ ನಿರ್ಧಾರ ಕೈಗೊಳ್ಳದು” ಎಂದು ಕೈಲಾಸ್‌ ತಿಳಿಸಿದ್ದಾರೆ.

ರಾಷ್ಟ್ರಾದ್ಯಂತ ಮಂದಿರ ನಿರ್ಮಾಣಕ್ಕೆ ಹೆಚ್ಚಿರುವ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿರುವ ಕೈಲಾಸ್‌, “ಮಂದಿರ ನಿರ್ಮಾಣದ ವಿಚಾರವನ್ನು ಮುನ್ನೆಲೆಗೆ ತಂದಿರುವುದು ಬಿಜೆಪಿಯಲ್ಲ. ವಿಎಚ್‌ಪಿ ಮತ್ತಿತರ ಹಿಂದೂ ಸಂಘಟನೆಗಳು ಈ ವಿಚಾರವನ್ನು ಮುನ್ನೆಲೆಗೆ ತಂದಿವೆ. ಮಂದಿರದ ವಿಚಾರವನ್ನು ಮುಂದಿಟ್ಟುಕೊಂಡು ನಾವು ಜನರ ಬಳಿ ಮತ ಕೇಳಲು ಹೋಗುವುದಿಲ್ಲ. ನಮ್ಮ ಅಜೆಂಡಾ ‘ಎಲ್ಲರ ಜತೆಗೆ ಎಲ್ಲರ ವಿಕಾಸ’ (ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌)” ಎಂದಿದ್ದಾರೆ.