ಪಾಕ್‌ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾದರೆ ಭಾರತದ ನೆರವು: ರಾಜನಾಥ್‌ ಸಿಂಗ್‌
ಸುದ್ದಿ ಸಾರ

ಪಾಕ್‌ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾದರೆ ಭಾರತದ ನೆರವು: ರಾಜನಾಥ್‌ ಸಿಂಗ್‌

ಒಂದೊಮ್ಮೆ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ನೆರವನ್ನು ಕೋರಿದ್ದೇ ಆದರೆ ಅದು ದಕ್ಷಿಣ ಏಷ್ಯಾದಲ್ಲಿ ಮಹತ್ವದ ಬದಲಾವಣೆಗಂತೂ ಸಾಕ್ಷಿಯಾಗಲಿದೆ.

ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾದರೆ ಭಾರತ ಮಧ್ಯಪ್ರವೇಶಕ್ಕೆ ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಹೇಳಿದ್ದಾರೆ.

ಜೈಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಂಗ್‌, “ಪಾಕಿಸ್ತಾನವೊಂದಕ್ಕೇ ಭಯೋತ್ಪಾದನೆ ನಿಗ್ರಹ ಕಷ್ಟವಾದರೆ ಅದು ಭಾರತದ ನೆರವನ್ನು ಕೋರಬಹುದು. ಈ ಬಗ್ಗೆ ಮಾತುಕತೆಗೆ ಭಾರತ ಸಿದ್ಧವಿದೆ. ಪಾಕಿಸ್ತಾನ್ ಪ್ರಧಾನಿ ಈ ಬಗ್ಗೆ ಮನಸ್ಸು ಮಾಡಬೇಕು” ಎಂದಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ವಿಚಾರ ದೇಶದ ಆಂತರಿಕ ವಿಷಯ. ಆದರೆ, ಭಯೋತ್ಪಾದನೆ ನಿಗ್ರಹದ ಬಗ್ಗೆ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆ ನಡೆಸಬಹುದು. ನೆರೆಯ ಆಫ್ಘಾನಿಸ್ತಾನ ಅಮೆರಿಕದ ನೆರವಿನೊಂದಿಗೆ ತಾಲಿಬಾನ್‌ ವಿರುದ್ಧ ಹೋರಾಡುವುದು ಸಾಧ್ಯವಾದರೆ, ಪಾಕಿಸ್ತಾನ ಭಾರತದ ನೆರವನ್ನು ಕೋರುವುದರಲ್ಲಿ ತಪ್ಪೇನಿಲ್ಲ” ಎಂದು ಸಿಂಗ್‌ ಹೇಳಿದ್ದಾರೆ.

ಜಮ್ಮು – ಕಾಶ್ಮೀರದ ವಿಷಯವೇ ಬೇರೆ ಭಯೋತ್ಪಾದನೆ ನಿಗ್ರಹದ ವಿಷಯವೇ ಬೇರೆ ಎನ್ನುವ ಮೂಲಕ ಸಿಂಗ್‌ ಗಡಿಯಲ್ಲಿನ ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಮುಂದಾಗಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಒಂದೊಮ್ಮೆ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ನೆರವನ್ನು ಕೋರಿದ್ದೇ ಆದರೆ ಅದು ದಕ್ಷಿಣ ಏಷ್ಯಾದಲ್ಲಿ ಮಹತ್ವದ ಬದಲಾವಣೆಗಂತೂ ಸಾಕ್ಷಿಯಾಗಲಿದೆ.