samachara
www.samachara.com
‘ಮೋದಿ ಎಂಥ ಹಿಂದೂ’  ರಾಹುಲ್‌ ಗಾಂಧಿ ಪ್ರಶ್ನೆ; ರಾಹುಲ್‌ ಗೊಂದಲದಲ್ಲಿದ್ದಾರೆ ಎಂದ ಬಿಜೆಪಿ
ಸುದ್ದಿ ಸಾರ

‘ಮೋದಿ ಎಂಥ ಹಿಂದೂ’ ರಾಹುಲ್‌ ಗಾಂಧಿ ಪ್ರಶ್ನೆ; ರಾಹುಲ್‌ ಗೊಂದಲದಲ್ಲಿದ್ದಾರೆ ಎಂದ ಬಿಜೆಪಿ

ಹಿಂದುತ್ವದ ವಿಚಾರದಲ್ಲಿ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರೆ, ಬಿಜೆಪಿ ಪಡೆ ರಾಹುಲ್‌ ಜಾತಿ, ಧರ್ಮವನ್ನು ಪ್ರಶ್ನಿಸಿದೆ.

“ಹಿಂದುತ್ವದ ಬುನಾದಿ ಹಾಗೂ ಮೂಲತತ್ವಗಳನ್ನೇ ಅರ್ಥ ಮಾಡಿಕೊಳ್ಳದ ನರೇಂದ್ರ ಮೋದಿ ಎಂಥ ಹಿಂದೂ” ಎಂದಿದ್ದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮುಖಂಡರು ಜಾತಿ ಹಾಗೂ ಧರ್ಮದ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ರಾಜಸ್ತಾನದ ಉದಯ್‌ಪುರದಲ್ಲಿ ಮಾತನಾಡುತ್ತಾ ರಾಹುಲ್‌, “ಹಿಂದೂ ಧರ್ಮದ ಮೂಲ ತತ್ವವೇನು? ಭಗವದ್ಗೀತೆ ಏನು ಹೇಳುತ್ತದೆ? ಜ್ಞಾನ ಎಲ್ಲರಲ್ಲಿಯೂ, ಎಲ್ಲ ಕಡೆಯಲ್ಲೂ ಇದೆ ಎನ್ನುತ್ತದೆ. ನಮ್ಮ ಪ್ರಧಾನಿ ತಾವು ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಹಿಂದೂ ಧರ್ಮದ ಈ ಮೂಲ ತತ್ವವೇ ಅವರಿಗೆ ಅರ್ಥವಾಗಿಲ್ಲ. ಅವರು ಎಂಥ ಹಿಂದೂ?” ಎಂದು ಪ್ರಶ್ನಿಸಿದ್ದರು.

ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್‌, “ಮೋದಿ ಯಾವ ರೀತಿಯ ಹಿಂದು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ಜಾತಿ ಮತ್ತು ಧರ್ಮ ಯಾವುದು ಎಂಬ ಬಗ್ಗೆ ಖುದ್ದು ರಾಹುಲ್‌ ಹಾಗೂ ಕಾಂಗ್ರೆಸ್‌ ಪಕ್ಷಕ್ಕೇ ಗೊಂದಲವಿದೆ. ಕೆಲ ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷ ರಾಹುಲ್‌ ಗಾಂಧಿಯನ್ನು ಜಾತ್ಯತೀತ ನಾಯಕ ಎಂದು ಬಿಂಬಿಸಿತು. ಈಗ ಬಹುಸಂಖ್ಯಾತ ಹಿಂದೂಗಳ ಓಲೈಕೆಗಾಗಿ ಹಿಂದೂ ನಾಯಕ ಎಂದು ಬಿಂಬಿಸುತ್ತಿದೆ” ಎಂದಿದ್ದಾರೆ.

“ರಾಹುಲ್‌ ತಮ್ಮನ್ನು ಜನಿವಾರಧಾರಿ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ. ಜನಿವಾರಧಾರಿ ಬ್ರಾಹ್ಮಣರಾಗಿ ಅವರಿಗೆ ಹಿಂದೂ ಎಂದರೇನು ಎಂಬ ಜ್ಞಾನ ವೃದ್ಧಿಯಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾವು ಅವರಿಂದ ಹಿಂದೂ ಎಂದರೇನು ಪಾಠ ಹೇಳಿಸಿಕೊಳ್ಳಬೇಕಾದ ದಿನಗಳು ಬಾರದಿರಲಿ ದೇವರೆ” ಎಂದು ಸ್ವರಾಜ್‌ ಅಣಕವಾಗಿದ್ದಾರೆ.

“ರಾಹುಲ್ ಗಾಂಧಿ ಸಮಸ್ಯೆ ಎಂದರೆ ಅವರು ಸದಾ ಗೊಂದಲದಲ್ಲಿರುತ್ತಾರೆ. ರಾಜಕೀಯ ಕಾರಣಕ್ಕಾಗಿ ಅವರು ತಮ್ಮನ್ನು ಹಿಂದೂ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಹಿಂದೂ ಬದ್ಧತೆ ಅವರಲ್ಲಿಲ್ಲ. ಅವರು ಬದ್ಧತೆ ಇರುವ ಹಿಂದೂ ಅಲ್ಲ, ರಾಜಕೀಯ ಲಾಭಕ್ಕಾಗಿ ಹಿಂದೂ. ರಾಜಕೀಯ ಲಾಭಗಳಿಗಾಗಿ ಅವರ ಹಿಂದೂ ನಂಬಿಕೆಗಳೂ ಬದಲಾಗುತ್ತಿರುತ್ತವೆ” ಎಂದು ಮತ್ತೊಬ್ಬ ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.