ಹಿಂದೂ ಐಕ್ಯ ವೇದಿ ಅಧ್ಯಕ್ಷೆಯನ್ನು ಬಂಧಿಸಿದ್ದ ಕೇರಳ ಮಹಿಳಾ ಪೊಲೀಸರಿಗೆ ನಗದು ಬಹುಮಾನ
ಸುದ್ದಿ ಸಾರ

ಹಿಂದೂ ಐಕ್ಯ ವೇದಿ ಅಧ್ಯಕ್ಷೆಯನ್ನು ಬಂಧಿಸಿದ್ದ ಕೇರಳ ಮಹಿಳಾ ಪೊಲೀಸರಿಗೆ ನಗದು ಬಹುಮಾನ

ಇಬ್ಬರು ಮಹಿಳಾ ಪೊಲೀಸ್‌ ಅಧಿಕಾರಿಗಳಿಗೆ ತಲಾ 1000 ರೂಪಾಯಿ ಹಾಗೂ ಎಂಟು ಮಂದಿ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ತಲಾ 500 ರೂಪಾಯಿ ಬಹುಮಾನವನ್ನು ಕೇರಳ ಸರಕಾರ ನೀಡಿದೆ.

ಶಬರಿಮಲೆಯಲ್ಲಿ ಹಿಂದೂ ಐಕ್ಯ ವೇದಿ ಸಂಘಟನೆಯ ಅಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ಬಂಧಿಸಿದ್ದ ಕೇರಳ ಪೊಲೀಸ್‌ ಇಲಾಖೆಯ ಮಹಿಳಾ ಅಧಿಕಾರಿಗಳಿಗೆ 1000 ರೂಪಾಯಿವರೆಗೆ ಬಹುಮಾನ ನೀಡಲಾಗಿದೆ.

ಹಿಂದುತ್ವ ಸಂಘಟನೆಯಾದ ಹಿಂದೂ ಐಕ್ಯ ವೇದಿಯ ಶಶಿಕಲಾ ನವೆಂಬರ್‌ 17ರಂದು ಇಡುಮುಡಿ ಹೊತ್ತು ಅಯ್ಯಪ್ಪ ದೇಗುಲಕ್ಕೆ ಹೊರಟ್ಟಿದ್ದರು. ಶಬರಿಮಲೆಗೆ ಹೋಗಿದ್ದ ಶಶಿಕಲಾ ದೇಗುಲದ ಬಾಗಿಲು ಹಾಕಿದ ಬಳಿಕವೂ ಅಲ್ಲೇ ಉಳಿಯಲು ಮುಂದಾಗಿದ್ದರು. ಆದರೆ, ಅವರು ಶಬರಿಮಲೆಯಲ್ಲಿ ಉಳಿಯುವುದರಿಂದ ಕಾನೂನು- ಸುವ್ಯವಸ್ಥೆ ಭಂಗವಾಗಬಹುದೆಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸಲಾಗಿತ್ತು.

ಶಶಿಕಲಾ ಅವರನ್ನು ಬಂಧಿಸುವ ಮೂಲಕ ಮುಂದೆ ಆಗಬಹುದಾಗಿದ್ದ ಸಂಭಾವ್ಯ ಗಲಭೆಯನ್ನು ನಿಯಂತ್ರಿಸಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಮಹಿಳಾ ಪೊಲೀಸ್‌ ಅಧಿಕಾರಿಗಳಿಗೆ ತಲಾ 1000 ರೂಪಾಯಿ ಹಾಗೂ ಎಂಟು ಮಂದಿ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ತಲಾ 500 ರೂಪಾಯಿ ಬಹುಮಾನವನ್ನು ಕೇರಳ ಸರಕಾರ ನೀಡಿದೆ.

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್‌ ಆದೇಶವನ್ನೇನೋ ನೀಡಿದೆ. ಆದರೆ, ಸುಪ್ರೀಂಕೋರ್ಟ್‌ ಆದೇಶ ಜಾರಿಗೆ ಹಿಂದೂ ಸಂಘಟನೆಗಳು ಅಡ್ಡಿಪಡಿಸುತ್ತಲೇ ಇವೆ. ಇದರಿಂದ ಶಬರಿಮಲೆ ಈ ಬಾರಿ ಯಾತ್ರಾ ಕ್ಷೇತ್ರವಾಗುವ ಬದಲು ವಿವಾದಿತ ಕೇಂದ್ರವಾಗಿದೆ.