‘ಭಾರತದ ಪಾಲಿಗೆ ನಾನೀಗ ರಾವಣ’; ದೇಶಕ್ಕೆ ಬರಲು ನೀರವ್‌ ಮೋದಿಗೆ ಭಯವಂತೆ!
ಸುದ್ದಿ ಸಾರ

‘ಭಾರತದ ಪಾಲಿಗೆ ನಾನೀಗ ರಾವಣ’; ದೇಶಕ್ಕೆ ಬರಲು ನೀರವ್‌ ಮೋದಿಗೆ ಭಯವಂತೆ!

“50 ಅಡಿ ಎತ್ತರದ ನನ್ನ ಪ್ರತಿಕೃತಿಯನ್ನು ಭಾರತದಲ್ಲಿ ದಹನ ಮಾಡಲಾಗಿದೆ. ನಾನು ದೇಶಕ್ಕೆ ಬಂದರೆ ಜನರೇ ನನ್ನನ್ನು ಕೊಂದು ಹಾಕುತ್ತಾರೆ...

ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ ಭಾರತಕ್ಕೆ ಬರಲು ತಮಗೆ ಜೀವ ಬೆದರಿಕೆ ಇದೆ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನೀರವ್‌ ಮೋದಿ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ‘ಅಕ್ರಮ ಹಣಕಾಸು ವಹಿವಾಟು ನಿಯಂತ್ರಣ (ಪಿಎಂಎಲ್‌ಎ) ನ್ಯಾಯಾಲಯ’ದ ಮುಂದೆ ಹೇಳಿಕೆ ದಾಖಲಿಸಿದ ನೀರವ್‌ ಮೋದಿ ಪರ ವಕೀಲ ವಿಜಯ್‌ ಅಗರ್‌ವಾಲ್‌, ತಮ್ಮ ಕಕ್ಷಿದಾರರಿಗೆ ಭಾರತಕ್ಕೆ ಬರಲು ಅಭದ್ರತೆಯೇ ಕಾರಣ ಎಂದಿದ್ದಾರೆ.

“50 ಅಡಿ ಎತ್ತರದ ನನ್ನ ಪ್ರತಿಕೃತಿಯನ್ನು ಭಾರತದಲ್ಲಿ ದಹನ ಮಾಡಲಾಗಿದೆ. ಭಾರತದ ಜನ ನನ್ನನ್ನು ರಾವಣ ಎಂದು ಭಾವಿಸಿದ್ದಾರೆ. ಜನರು ಈಗ ನನ್ನನ್ನು ದೆವ್ವದಂತೆ ನೋಡುತ್ತಿದ್ದಾರೆ. ಭಾರತದಲ್ಲಿ ಬ್ಯಾಂಕ್‌ ವಂಚಕರ ಪ್ರತಿನಿಧಿಯಂತೆ ನನ್ನನ್ನು ಬಿಂಬಿಸಲಾಗಿದೆ. ನಾನು ದೇಶಕ್ಕೆ ಬಂದರೆ ಜನರೇ ನನ್ನನ್ನು ಕೊಂದು ಹಾಕುತ್ತಾರೆ” ಎಂದು ನೀರವ್‌ ಮೋದಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹೇಳಿದ್ದಾರೆ.

‘ಆರ್ಥಿಕ ಅಪರಾಧಗಳ ಕಾಯ್ದೆಯಡಿ ನೀರವ್‌ ಮೋದಿಯನ್ನು ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೀರವ್‌ ಪರ ವಕೀಲರು, ಆರ್ಥಿಕ ಅಪರಾಧ ಎಸಗಿರುವುದಕ್ಕೆ ಯಾವುದೇ ಸೂಕ್ತ ದಾಖಲೆಗಳು ಇಲ್ಲ ಎಂದು ವಾದಿಸಿದ್ದಾರೆ.

ನೀರವ್‌ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯ ಭಾರತಕ್ಕೆ ಬರಲು ಸುರಕ್ಷತೆಯ ವಿಷಯವನ್ನು ಮುಂದಿಡುತ್ತಿರುವುದು ವಿತಂಡವಾದ ಎಂದಿದೆ.

“ನೀರವ್‌ ಮೋದಿ ದೇಶಕ್ಕೆ ಬರಲು ಜೀವಭಯವಿದ್ದರೆ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಬಹುದಿತ್ತು. ಆದರೆ, ಈವರೆಗೆ ಭದ್ರತೆಗಾಗಿ ಯಾವುದೇ ಮನವಿಯನ್ನು ಸಲ್ಲಿಸಿಲ್ಲ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಜೀವ ಭಯದ ನೆಪ ಒಡ್ಡುತ್ತಿದ್ದಾರೆ” ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಹಿತೇನ್‌ ವೆನೆಗೋಂಕರ್‌ ಹೇಳಿದ್ದಾರೆ.