samachara
www.samachara.com
ಪಾಕ್‌ ವಿಚಾರದಲ್ಲಿ ಭಾರತ ‘ಜಾತ್ಯತೀತ ರಾಷ್ಟ್ರ’ ಎಂದು ನೆನಪಿಸಿದ ಭಾರತದ ಸೇನಾ ಮುಖ್ಯಸ್ಥ!
ಸುದ್ದಿ ಸಾರ

ಪಾಕ್‌ ವಿಚಾರದಲ್ಲಿ ಭಾರತ ‘ಜಾತ್ಯತೀತ ರಾಷ್ಟ್ರ’ ಎಂದು ನೆನಪಿಸಿದ ಭಾರತದ ಸೇನಾ ಮುಖ್ಯಸ್ಥ!

ಕಳೆದ ನಾಲ್ಕು ವರ್ಷಗಳಿಂದ ತಾನೊಂದು ಜಾತ್ಯತೀತ ರಾಷ್ಟ್ರ ಎಂಬುದನ್ನು ಮರೆತಂತಿದ್ದ ಭಾರತಕ್ಕೆ ರಾವತ್‌ ಮಾತುಗಳು ಹೊರನೋಟಕ್ಕಾದರೂ ‘ಜಾತ್ಯತೀತತೆ’ಯ ನೆನಪು ಮೂಡಿಸುವಂತಿವೆ!

Team Samachara

ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದರೂ ಭಾರತದ ಸಚಿವರ್ಯಾರೂ ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಪಾಕ್‌ ಪ್ರಧಾನಿಯ ಹೇಳಿಕೆಗೆ ಭಾರತದ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾವತ್, “ಮಾತುಕತೆಗೂ ಮುನ್ನಾ ಪಾಕಿಸ್ತಾನ ಜಾತ್ಯತೀತ ರಾಷ್ಟ್ರವಾಗಲಿ” ಎಂದಿದ್ದಾರೆ. ಈ ಮೂಲಕ ಭಾರತ ಜಾತ್ಯತೀತ ರಾಷ್ಟ್ರ ಎಂಬುದನ್ನು ರಾವತ್‌ ಮಾತು ನೆನಪಿಸಿದೆ!

ಭಾರತದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಪರೋಕ್ಷವಾಗಿ ಹೇಳುತ್ತಿರುವ ಪಾಕಿಸ್ತಾನದ ನಿಲುವನ್ನು ಪ್ರಶ್ನಿಸಿರುವ ರಾವತ್‌, “ಭಯೋತ್ಪಾದನೆ, ಶಾಂತಿ ಮಾತುಕತೆ ಒಟ್ಟೊಟ್ಟಿಗೆ ನಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ಮಾತುಕತೆಯ ಸಂಬಂಧ ಮಾತನಾಡುತ್ತಾ ಇಮ್ರಾನ್‌ ಖಾನ್‌, “ಮಾತುಕತೆಗೆ ಭಾರತ ಮೊದಲ ಹೆಜ್ಜೆ ಇಟ್ಟರೆ, ಪಾಕಿಸ್ತಾನ ಎರಡನೇ ಹೆಜ್ಜೆ ಇಡಲಿದೆ" ಎಂದಿದ್ದರು. “ಭಾರತ ಹಲವು ಬಾರಿ ಇಂಥ ಮೊದಲ ಹೆಜ್ಜೆಗಳನ್ನು ಈ ಹಿಂದೆ ಇಟ್ಟಿದೆ. ಈಗ ಗಡಿಯಲ್ಲಿನ ಭಯೋತ್ಪಾದನೆಯನ್ನು ನಿಲ್ಲಿಸಿ ಮೊದಲನೇ ಹೆಜ್ಜೆ ಇಡಬೇಕಾದ ಸರದಿ ಪಾಕಿಸ್ತಾನದ್ದು” ಎಂದು ರಾವತ್‌ ತಿಳಿಸಿದ್ದಾರೆ.

"ಪಾಕಿಸ್ತಾನ ತನ್ನನ್ನು ಇಸ್ಲಾಂ ರಾಷ್ಟ್ರವಾಗಿಸಿಕೊಂಡಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಮುಂದಾಗಬೇಕೆಂದರೆ ಮೊದಲು ಜಾತ್ಯತೀತ ರಾಷ್ಟ್ರವಾಗಬೇಕು. ಪಾಕಿಸ್ತಾನ ಇಸ್ಲಾಂ ರಾಷ್ಟ್ರವಾಗಿರುವವರೆಗೂ ಶಾಂತಿ ಮಾತುಕತೆ ಕೈಗೂಡುವುದು ಕಷ್ಟ" ಎಂದಿದ್ದಾರೆ ರಾವತ್.

ಶಾಂತಿ ಮಾತುಕತೆಯ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಭಾರತ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆಯೋ ಗೊತ್ತಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳಿಂದ ತಾನೊಂದು ಜಾತ್ಯತೀತ ರಾಷ್ಟ್ರ ಎಂಬುದನ್ನು ಮರೆತಂತಿದ್ದ ಭಾರತಕ್ಕೆ ರಾವತ್‌ ಮಾತುಗಳು ಹೊರನೋಟಕ್ಕಾದರೂ ‘ಜಾತ್ಯತೀತತೆ’ಯ ನೆನಪು ಮೂಡಿಸುವಂತಿವೆ!