ದೆಹಲಿಯಲ್ಲಿ ‘ಕಿಸಾನ್‌ ಮುಕ್ತಿ ಮಾರ್ಚ್‌’; ಸಂಸತ್‌ನ ವಿಶೇಷ ಜಂಟಿ ಅಧಿವೇಶನಕ್ಕಾಗಿ ರೈತರ ಒತ್ತಾಯ
ಸುದ್ದಿ ಸಾರ

ದೆಹಲಿಯಲ್ಲಿ ‘ಕಿಸಾನ್‌ ಮುಕ್ತಿ ಮಾರ್ಚ್‌’; ಸಂಸತ್‌ನ ವಿಶೇಷ ಜಂಟಿ ಅಧಿವೇಶನಕ್ಕಾಗಿ ರೈತರ ಒತ್ತಾಯ

ನಾಳೆ ರಾಮ್ ಲೀಲಾ ಮೈದಾನದಲ್ಲಿ ರೈತರ ಬೃಹತ್‌ ಸಮಾವೇಶ ನಡೆಯಲಿದ್ದು, ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ರೈತರನ್ನು ಸಾಲದ ಸುಳಿಯಿಂದ ರಕ್ಷಿಸಲು, ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸಲು ಹಾಗೂ ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಜಂಟಿ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಮಾವಣೆಗೊಂಡಿದ್ದಾರೆ.

ಕಳೆದ 15 ವರ್ಷಗಳಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಕೃಷಿ ಸಮಸ್ಯೆಗಳ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಅಖಿಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ’ ಹೆಸರಿನ ರೈತ ಒಕ್ಕೂಟದಡಿ ದೇಶದ ವಿವಿಧ ಭಾಗಗಳ ಸುಮಾರು 200 ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಮಾವೇಶದಲ್ಲಿ ಭಾಗವಹಿಸಿವೆ. ಸುಮಾರು ಒಂದು ಲಕ್ಷ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ರೈತ ಸಮಾವೇಶವನ್ನು ಬೆಂಬಲಿಸಿರುವ ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು, ವೈದ್ಯರು, ಪತ್ರಕರ್ತರು, ಛಾಯಾಗ್ರಾಹಕರು, ಚಿಂತಕರು ಹಾಗೂ ದೆಹಲಿಯ ನಾಗರಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ರೈತರ ಸಮಸ್ಯೆಗಳು ರೈತರ ಸಮಸ್ಯೆಗಳು ಮಾತ್ರವಲ್ಲ, ಅವು ಎಲ್ಲರ ಸಮಸ್ಯೆಗಳು. ಹೀಗಾಗಿ ಎಲ್ಲರೂ ಈ ಸಮಾವೇಶದಲ್ಲಿ ಭಾವಹಿಸಿ ಬೆಂಬಲಿಸಬೇಕು ಎಂದು ಪತ್ರಕರ್ತ ಪಿ.ಸಾಯಿನಾಥ್‌, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್‌ ಸೇರಿದಂತೆ ಹಲವರು ಮನವಿ ಮಾಡಿದ್ದರು.

ದೇಶದ ವಿವಿಧ ಭಾಗಗಳಿಂದ ಹೊರಟು ಇಂದು ಬೆಳಗಿನ ಜಾವ ದೆಹಲಿ ತಲುಪಿದ ಸಾವಿರಾರು ಮಂದಿ ರೈತರಿಗೆ ಸ್ವಯಂಸೇವಕರು ಹೊದೆಯಲು ಕಂಬಳಿಗಳನ್ನು ನೀಡಿದ್ದಾರೆ. ಬೆಳಿಗ್ಗೆ ರೈತರಿಗೆ ಸ್ವಯಂಸೇವಕರು ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ದೆಹಲಿ ರೈಲು ನಿಲ್ದಾಣದಲ್ಲಿ ಜಮಾವಣೆಗೊಂಡಿದ್ದ ರೈತರು ರಾಮ್ ಲೀಲಾ ಮೈದಾನದವರೆಗೆ ಮೆರವಣಿಗೆ ಹೊರಟಿದ್ದಾರೆ. ನಾಳೆ ರಾಮ್ ಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ಕರ್ನಾಟಕದಿಂದಲೂ ಸುಮಾರು 2 ಸಾವಿರ ಮಂದಿ ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರು ಸ್ವಾಭಿಮಾನದಿಂದ ಬದುಕುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕು. ಇದಕ್ಕಾಗಿ ಸರಕಾರದ ನೀತಿ ನಿರೂಪಣೆಗಳಲ್ಲಿ ರೈತನನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಸರಕಾರ ಜಾರಿಗೆ ತರಬೇಕು. ಬೆಳೆಗಳಿಗೆ ನ್ಯಾಯಯುತವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.