samachara
www.samachara.com
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾ ಬಂಧನ; ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಆರೋಪ
ಸುದ್ದಿ ಸಾರ

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾ ಬಂಧನ; ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಆರೋಪ

ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ರೆಹನಾ ಫಾತಿಮಾ ಅವರನ್ನು ಬಂಧಿಸಲಾಗಿದೆ.

Team Samachara

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ಕೇರಳದ ರೂಪದರ್ಶಿ, ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರನ್ನು ಪಟನಂಥಿಟ್ಟ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಅಯ್ಯಪ್ಪ ಭಕ್ತರು ಧರಿಸುವ ಕಪ್ಪು ಬಟ್ಟೆ ಹಾಗೂ ರುದ್ರಾಕ್ಷಿ ಧರಿಸಿ, ಹಣೆಗೆ ವಿಭೂತಿ ಇಟ್ಟುಕೊಂಡು ಕುಳಿತಿದ್ದ ಫೋಟೋ ಅನ್ನು ‘ತತ್ವಮಸಿ’ ಎಂಬ ಕ್ಯಾಪ್ಷನ್‌ ಜತೆಗೆ ಫಾತಿಮಾ ಸೆಪ್ಟೆಂಬರ್‌ 30ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಫೋಟೊದಲ್ಲಿ ಫಾತಿಮಾ ಮೊಣಕಾಲು ಕಾಣುವಂತೆ ಕುಳಿತು ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಯ್ಯಪ್ಪ ಭಕ್ತರು ಕೊಚ್ಚಿ, ತಿರುವನಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಫಾತಿಮಾ ಸೆಪ್ಟೆಂಬರ್‌ 30ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಫೋಟೊ

ಇದಲ್ಲದೆ ಫಾತಿಮಾ ಪೋಸ್ಟ್‌ ಮಾಡಿದ್ದ ಫೋಟೊ ಬಗ್ಗೆ ಆಕ್ಷೇಪಿಸಿ ‘ಶಬರಿಮಲೆ ಸಂರಕ್ಷಣಾ ಸಮಿತಿ’ಯ ಕಾರ್ಯದರ್ಶಿ ಪಿ. ಪದ್ಮಕುಮಾರ್ ಪಟನಂಥಿಟ್ಟ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೇರವಾಗಿ ದೂರು ನೀಡಿದ್ದರು. ಐಪಿಸಿ 295ಎ ಕಲಂ ಅಡಿಯಲ್ಲಿ ಅಕ್ಟೋಬರ್‌ 22ರಂದು ಪ್ರಕರಣ ದಾಖಲಿಸಿಕೊಂಡಿದ್ದ ಪಟನಂಥಿಟ್ಟ ಪೊಲೀಸರು, ಫಾತಿಮಾ ಅವರನ್ನು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಕೆಲಸ ಮಾಡುವ ಕೊಚ್ಚಿಯ ಬಿಎಸ್ಎನ್‌ಎಲ್‌ ಕಚೇರಿಯಲ್ಲೇ ಬಂಧಿಸಿ ಕರೆದೊಯ್ದಿದ್ದಾರೆ.

ತಮ್ಮ ವಿರುದ್ಧ ದೂರುಗಳು ದಾಖಲಾದ ಬಳಿಕ ನಿರೀಕ್ಷಣಾ ಜಾಮೀನು ಕೋರಿ ಫಾತಿಮಾ ಅಕ್ಟೋಬರ್‌ 30ರಂದು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ನವೆಂಬರ್‌ 16ರಂದು ಈ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಕೇರಳ ಹೈಕೋರ್ಟ್‌, ಫಾತಿಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯಾವುದೇ ಆಕ್ಷೇಪ ಇಲ್ಲ ಎಂದಿತ್ತು. ಕೇರಳ ಹೈಕೋರ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಫಾತಿಮಾ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಪ್ರಯತ್ನ ನಡೆಸಿದ್ದರು.

ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಪೊಲೀಸ್‌ ಭದ್ರತೆಯಲ್ಲಿ ಫಾತಿಮಾ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ, ಶಬರಿಮಲೆಯಲ್ಲಿ ಜಮಾಯಿಸಿದ್ದ ಅಯ್ಯಪ್ಪ ಭಕ್ತರು ಫಾತಿಮಾ ಸೇರಿದಂತೆ ಯಾವುದೇ ಮಹಿಳೆಯರು ಶಬರಿಮಲೆಗೆ ಹೋಗದಂತೆ ತಡೆದು ವಾಪಸ್‌ ಕಳಿಸಿದ್ದರು.