samachara
www.samachara.com
ನ. 28 - ಡಿ. 2ರವರೆಗೆ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಂಗೋತ್ಸವ, ಬಹುಭಾಷಾ ನಾಟಕಗಳ ಪ್ರದರ್ಶನ
ಸುದ್ದಿ ಸಾರ

ನ. 28 - ಡಿ. 2ರವರೆಗೆ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಂಗೋತ್ಸವ, ಬಹುಭಾಷಾ ನಾಟಕಗಳ ಪ್ರದರ್ಶನ

ಈ ಬಹುಭಾಷಾ ನಾಟಕೋತ್ಸವದಲ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳ ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ. ತಮಿಳು, ಮರಾಠಿ, ಮಲಯಾಳಂ, ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.

Team Samachara

ಮೊದಲ ಬಾರಿಗೆ ಕರ್ನಾಟಕ ನಾಟಕ ಅಕಾಡೆಮಿ ಶಿವಮೊಗ್ಗದಲ್ಲಿ ಬಹುಭಾಷಾ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಿದೆ. ನವೆಂಬರ್ 28 ರಿಂದ ಡಿಸೆಂಬರ್ 1ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಆಯ್ದ ಆರು ಭಾಷೆಯ ನಾಟಕಗಳ ಪ್ರದರ್ಶನ ನಡೆಯಲಿದೆ.

ಕರ್ನಾಟಕ ನಾಟಕ ಅಕಾಡೆಮಿಯು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಈ ಬಹುಭಾಷಾ ನಾಟಕೋತ್ಸವದಲ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳ ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ.

ತಮಿಳು, ಮರಾಠಿ, ಮಲಯಾಳಂ, ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಈ ನಾಟಕಗಳ ಮೂಲಕ ಕರ್ನಾಟಕವೂ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ ಹೀಗೆ ಐದು ರಾಜ್ಯಗಳ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹಾಗೂ ವಿಭಿನ್ನ ರಂಗಪ್ರಯೋಗಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಹಿಂದೆ ಪ್ರಕಟಗೊಂಡಂತೆ ರಂಗೋತ್ಸವ ನವೆಂಬರ್‌ 27ರಂದು ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಶೋಕಾಚರಣೆಯ ಹಿನ್ನೆಲೆಯಲ್ಲಿ ನವೆಂಬರ್‌ 28ರಂದು ಸಂಜೆ 5.30 ಉದ್ಘಾಟನಾ ಸಮಾರಂಭ ನಡೆಯಲಿದೆ. ನೀನಾಸಂ ಮುಖ್ಯಸ್ಥರಾದ ಕೆ.ವಿ. ಅಕ್ಷರ ರಂಗೋತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ.ಎ. ದಯಾನಂದ, ತಂಜಾವೂರು ಕಲ್ಚರಲ್ ಸೆಂಟರ್‌ನ ಸದಸ್ಯರಾದ ತೊಟ್ಟುವಾಡಿ ನಂಜುಂಡಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಜೆ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಹಾಶ್ವೇತಾ ದೇವಿ ರಚನೆಯ ‘ಮದರ್ ಆಫ್ 1084’ ತಮಿಳು ನಾಟಕವು ನವೆಂಬರ್ 28 ರಂದು ಬೆಳಗ್ಗೆ 11.30ಕ್ಕೆ ಕುವೆಂಪು ರಂಗ ಮಂದಿರದಲ್ಲಿ ನಡೆಯಲಿದೆ. 28ರಂದು ಸಂಜೆ 7 ಗಂಟೆಗೆ ‘ದ ಟ್ರಾನ್ಸಪರೆಂಟ್‌ ಟ್ರಾಪ್‌’ ಎಂಬ ಮೂಕಿ ನಾಟಕ, 29ರಂದು 7 ಗಂಟೆಗೆ ಮಲಯಾಳಂ ಭಾಷೆಯ ‘ಪರಯಾನ್‌ ಮರಂದ ಕದೆಗಳ್‌’, 30ರಂದು ಸಂಜೆ 7 ಗಂಟಗೆ ತುಳು ಭಾಷೆಯ ‘ಆಟಿ ತಿಂಗೊಲ್ದ ಒಂಜಿ ದಿನ’, ಡಿಸೆಂಬರ್‌ 1ರಂದು ಬೆಳಿಗ್ಗೆ 11.30ಕ್ಕೆ ಕೊಂಕಣಿ ಭಾಷೆಯ ಪ್ರೇಮ ಜಾಗೋರ್‌, ಸಂಜೆ 7 ಗಂಟೆಗೆ ಕನ್ನಡದ ಕೆಂಪು ಕಣಗಿಲೆ ನಾಟಕಗಳ ಪ್ರದರ್ಶನ ನಡೆಯಲಿದೆ.

ವಿದ್ಯಾರ್ಥಿ ಗಳಿಗಾಗಿ ನಾಟಕ ವಿಮರ್ಶಾ ಸ್ಪರ್ಧೆಯನ್ನು ನಾಟಕ ಅಕಾಡೆಮಿ ಹಮ್ಮಿಕೊಂಡಿದೆ. ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಗಳು ನಾಟಕ ವೀಕ್ಷಿಸಿ ಮರುದಿನ ಮಧ್ಯಾಹ್ನ ಒಂದು ಗಂಟೆಯೊಳಗೆ ವಿಮರ್ಶೆ ಬರೆದು prathibhaspandana1@gmail.com ಗೆ ಕಳುಹಿಸಬಹುದು. ಅತ್ಯುತ್ತಮ ವಿಮರ್ಶೆಗಳಿಗೆ ನಾಟಕ ಅಕಾಡೆಮಿ ಬಹುಮಾನವನ್ನು ನೀಡಲಿದೆ.