ಮಾಜಿ ಕೇಂದ್ರ ಸಚಿವ ಜಾಫರ್‌ ಷರೀಫ್‌ ಇನ್ನಿಲ್ಲ
ಸುದ್ದಿ ಸಾರ

ಮಾಜಿ ಕೇಂದ್ರ ಸಚಿವ ಜಾಫರ್‌ ಷರೀಫ್‌ ಇನ್ನಿಲ್ಲ

ಕಾಂಗ್ರೆಸ್‌ ಇಬ್ಭಾಗವಾದಾಗ ಷರೀಫ್‌ ಇಂದಿರಾ ಗಾಂಧಿಯವರ ರೂಲಿಂಗ್‌ ಕಾಂಗ್ರೆಸ್‌ ಜತೆ ಗುರುತಿಸಿಕೊಂಡರು. ಗಾಂಧಿಯವರ ಆಪ್ತ ಕೂಟದಲ್ಲಿ ಇವರೂ ಒಬ್ಬರಾಗಿದ್ದರು.

ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್‌ ಷರೀಫ್‌ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

1933ರ ನವೆಂಬರ್‌ 3ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ ಜಾಫರ್‌ ಷರೀಫ್‌ ನಿಜಲಿಂಗಪ್ಪ ಅವರ ಕಾಲದಿಂದ ಕಾಂಗ್ರೆಸ್‌ ಪಕ್ಷದ ಜತೆ ತಮ್ಮನ್ನು ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ ಇಬ್ಭಾಗವಾದಾಗ ಮಾತ್ರ ಅವರು ಇಂದಿರಾ ಗಾಂಧಿಯವರ ರೂಲಿಂಗ್‌ ಕಾಂಗ್ರೆಸ್‌ ಜತೆ ಗುರುತಿಸಿಕೊಂಡರು. ಗಾಂಧಿಯವರ ಆಪ್ತ ಕೂಟದಲ್ಲಿ ಇವರೂ ಸೇರಿಕೊಂಡಿದ್ದರು.

ಅವರು ಪಿ.ವಿ. ನರಸಿಂಹ ರಾವ್‌ ಸಂಪುಟದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದರು. 1991 ರಿಂದ 1995ರವರೆಗೆ ರೈಲ್ವೇ ಖಾತೆ ಸಚಿವರಾಗಿದ್ದಾಗ ರೈಲ್ವೇ ಹಳಿಯನ್ನು ನ್ಯಾರೋ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಏರಿಸುವ ತೀರ್ಮಾನವನ್ನು ಅವರು ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ರೈಲ್ವೇ ಕಾರ್ಖಾನೆ ಬರುವಲ್ಲಿಯೂ ಅವರ ಕೊಡುಗೆ ಮಹತ್ತರವಾಗಿತ್ತು.

1977 ರಿಂದ 1999ರವರೆಗೆ 7 ಬಾರಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮಧ್ಯದಲ್ಲಿ ಒಮ್ಮೆ 1996ರಲ್ಲಿ ಮಾತ್ರ ಅವರು ಇಲ್ಲಿ ಚುನಾವಣೆಗೆ ನಿಲ್ಲಲಿಲ್ಲ. ಆದರೆ 1999ರ ನಂತರ ಅವರಿಗೆ ಗೆಲುವು ಮರೀಚಿಕೆಯಾಯಿತು. 2004ರಲ್ಲಿ ಸೋತ ಅವರು 2009ರಲ್ಲಿ ಕೊನೆಯ ಬಾರಿ ಚುನಾವಣಾ ಅಖಾಡಕ್ಕೆ ಇಳಿದು ಸೋಲನ್ನು ಕಾಣಬೇಕಾಯಿತು. ಮಾತ್ರ ಷರೀಫ್‌ ಅವರಿಂದ ಸಾಧ್ಯವಾಗಲಿಲ್ಲ.

ಅವರ ಕಿರಿಯ ಮಗ 1999ರಲ್ಲಿ ನಿಧನರಾದರೆ, ಪತ್ನಿ 2008ನೇ ಇಸವಿಯಲ್ಲಿ ಇಹಲೋಕ ತ್ಯಜಿಸಿದ್ದರು. ದೊಡ್ಡ ಮಗ 2009ರ ಚುನಾವಣೆಗೂ ಮುನ್ನ ಕೊನೆಯುಸಿರೆಳೆದಿದ್ದರು. ಇದೀಗ ಸ್ವತಃ ಷರೀಫ್‌ ಈ ಲೋಕ ಬಿಟ್ಟು ತೆರಳಿದ್ದಾರೆ.

ನಟ, ರಾಜಕಾರಣಿ ಅಂಬರೀಶ್ ನಿಧನದ ಹಿಂದೆಯೇ‌ ಜಾಫರ್ ಷರೀಫ್ ಸಾವಿನ ಸುದ್ದಿ ಹೊರಬಿದ್ದಿದೆ. ಈ ಮೂಲಕ ಇಬ್ಬರು ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಂತಾಗಿದೆ.