samachara
www.samachara.com
ರಫೇಲ್‌ ಡೀಲ್‌: ಫ್ರಾನ್ಸ್‌ನಲ್ಲಿ ಡಸಾಲ್ಟ್‌ ವಿರುದ್ಧ ಭ್ರಷ್ಟಾಚಾರದ ಆರೋಪ, ತನಿಖಾ ಕಚೇರಿಗೆ ದೂರು 
ಸುದ್ದಿ ಸಾರ

ರಫೇಲ್‌ ಡೀಲ್‌: ಫ್ರಾನ್ಸ್‌ನಲ್ಲಿ ಡಸಾಲ್ಟ್‌ ವಿರುದ್ಧ ಭ್ರಷ್ಟಾಚಾರದ ಆರೋಪ, ತನಿಖಾ ಕಚೇರಿಗೆ ದೂರು 

ಫ್ರಾನ್ಸ್‌ನ ಕಾನೂನು ಸಂಸ್ಥೆ ‘ಶೇರ್ಪಾ’ ಅಕ್ಟೋಬರ್ ಅಂತ್ಯದಲ್ಲಿ ಡಸಾಲ್ಟ್‌ ವಿರುದ್ಧ ದೂರು ನೀಡಿರುವುದಾಗಿ ತನಿಖಾ ವೆಬ್‌ಸೈಟ್‌ ಮೀಡಿಯಾಪಾರ್ಟ್‌ ವರದಿ ಮಾಡಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ರಫೇಲ್‌ ಡೀಲ್‌ ಸಂಬಂಧ ಭಾರತದ ನಂತರ ಫ್ರಾನ್ಸ್‌ನಲ್ಲಿ ದೂರು ದಾಖಲಾಗಿದೆ. ‘ಅಕ್ರಮ ಹಣದ ಹರಿವಿನ ಕುರಿತು’ ಕಣ್ಗಾವಲು ಇಡುವ ಫ್ರಾನ್ಸ್‌ನ ಸರಕಾರೇತರ ಸಂಸ್ಥೆಯೊಂದು ಅಲ್ಲಿನ ‘ರಾಷ್ಟ್ರೀಯ ಹಣಕಾಸು ತನಿಖಾ ಕಚೇರಿ’ಗೆ ಈ ಸಂಬಂಧ ದೂರು ನೀಡಿದೆ.

ಫ್ರಾನ್ಸ್‌ನ ಕಾನೂನು ಸಂಸ್ಥೆ ‘ಶೇರ್ಪಾ’ ಅಕ್ಟೋಬರ್ ಅಂತ್ಯದಲ್ಲಿ ತನಿಖಾಧಿಕಾರಿ ಕಚೇರಿಗೆ ದೂರು ನೀಡಿರುವುದಾಗಿ ಫ್ರಾನ್ಸ್‌ನ ತನಿಖಾ ವೆಬ್‌ಸೈಟ್‌ ಮೀಡಿಯಾಪಾರ್ಟ್‌ ವರದಿ ಮಾಡಿದೆ. ತನ್ನನ್ನು ತಾನು ಆರ್ಥಿಕ ಅಪರಾಧಗಳ ಸಂತ್ರಸ್ತರ ಪರ ಹೋರಾಡುವ ಸಂಸ್ಥೆ ಎಂದು ಹೇಳಿಕೊಳ್ಳುವ ಸಂಸ್ಥೆ ಇಂಥಹದ್ದೊಂದು ದೂರು ದಾಖಲಿಸಿರುವುದು ಇದೀಗ ಚರ್ಚಗೆ ಗ್ರಾಸವಾಗಿದೆ.

ಯಾವ ನಿಯಮದ ಮೇರೆಗೆ ಡಸಾಲ್ಟ್‌ ಏವಿಯೇಷನ್‌ 36 ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ನಿರ್ಧರಿಸಿತು ಮತ್ತು ಭಾರತದ ಪಾಲುದಾರ ಕಂಪನಿಯಾಗಿ ರಿಲಯನ್ಸ್‌ನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ದೂರಿನಲ್ಲಿ ಕೋರಲಾಗಿದೆ.

ಫ್ರಾನ್ಸ್‌ ಮತ್ತು ಡಸಾಲ್ಟ್‌ ಭ್ರಷ್ಟಾಚಾರ ನಡೆಸಿರುವ ಬಗ್ಗೆ ತನಿಖೆ ನಡೆಸುವಂತೆ ಸಂಸ್ಥೆ ಮನವಿ ಮಾಡಿದೆ. ಅಲ್ಲದೆ. ಡೀಲ್‌ನಲ್ಲಿ ಸಲ್ಲದ ಲಾಭ ಮಾಡಿಕೊಟ್ಟಿರುವುದು, ಡೀಲ್‌ ನಡೆಸಲು ಪ್ರಭಾವ ಬಳಸಿರುವುದು. ಅಕ್ರಮ ವ್ಯವಹಾರಗಳನ್ನು ನಡೆಸಿರುವುದರ ಬಗ್ಗೆಯೂ ಬೆಳಕು ಚೆಲ್ಲುವಂತೆ ಕೋರಿಕೊಂಡಿದೆ.

ಎಲ್ಲಾ ವಿಚಾರಗಳನ್ನು ನೋಡಿದಾಗ ಇದೊಂದು ಗಂಭೀರ ಪ್ರಕರಣ ಎಂದು ಅರಿವಾಗುತ್ತಿದೆ ಎಂಬುದಾಗಿ ಶೇರ್ಪಾ ಸಂಸ್ಥಾಪಕ ವಿಲಿಯನ್‌ ಬೌರ್ಡನ್‌ ‘ಮೀಡಿಯಾಪಾರ್ಟ್‌’ಗೆ ಹೇಳಿದ್ದಾರೆ. ಆದಷ್ಟು ಬೇಗ ತನಿಖೆ ಆರಂಭಿಸುವಂತೆ ಅವರು ಮನವಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ವರ್ಷದ ಆರಂಭದಿಂದಲೂ ಭಾರತದಲ್ಲಿ ರಪೇಲ್‌ ಡೀಲ್‌ ರಾಜಕೀಯ ಮತ್ತು ಕಾನೂನು ವಲಯದಲ್ಲಿ ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ. ಅನಿಲ್‌ ಅಂಬಾನಿಯ ‘ರಿಲಯನ್ಸ್‌ ಡಿಫೆನ್ಸ್‌’ಗೆ ಲಾಭ ಮಾಡಿಕೊಡಲೆಂದೇ ಈ ಡೀಲ್‌ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಲೇ ಬಂದಿದೆ. ಇದಕ್ಕೆ ಪುಷ್ಠಿ ನೀಡುವ ಹಲವು ತನಿಖಾ ವರದಿಗಳನ್ನು ಇದೇ ಮೀಡಿಯಾ ಪಾರ್ಟ್‌ ಜನರ ಮುಂದಿಟ್ಟಿತ್ತು..

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಡೀಲ್‌ನಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ವಕೀಲ ಕಂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್‌ 2018ರ ಅಕ್ಟೋಬರ್‌ನಲ್ಲಿ ಸಿಬಿಐಗೆ ದೂರು ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮಾಜಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಸೇರಿದಂತೆ ಹಲವರ ವಿರುದ್ಧ ಅವರು ದೂರು ನೀಡಿದ್ದರು. ಆದರೆ ಈ ತನಿಖೆ ನಡೆಸಬೇಕಾಗಿದ್ದ ಸಿಬಿಐ ಸಂಸ್ಥೆಯ ಸದ್ಯ ಗೊಂದಲ ಗೂಡಾಗಿರುವುದು ವಿಪರ್ಯಾಸ.

Also read: ಫ್ರೆಂಚ್ ಮೀಡಿಯಾ EXCLUSIVE: ಮೋದಿ, ಅಂಬಾನಿ ರಫೇಲ್ ಬಲೆ ಹೆಣೆದಿದ್ದು ಹೇಗೆ?