samachara
www.samachara.com
‘Anti ಕಾರ್ಪೊರೇಟ್‌’: ಚೈನಾ ಎಕನಾಮಿಕ್ ಕಾರಿಡಾರ್ ವಿರೋಧಿಸಿ ಪಾಕ್‌ನಲ್ಲಿ ‘ಬಂಡುಕೋರರ ದಾಳಿ’
ಸುದ್ದಿ ಸಾರ

‘Anti ಕಾರ್ಪೊರೇಟ್‌’: ಚೈನಾ ಎಕನಾಮಿಕ್ ಕಾರಿಡಾರ್ ವಿರೋಧಿಸಿ ಪಾಕ್‌ನಲ್ಲಿ ‘ಬಂಡುಕೋರರ ದಾಳಿ’

‘ಚೀನಾ ಪಾಕಿಸ್ತಾನ ಎಕಾನಾಮಿಕ್‌ ಕಾರಿಡಾರ್‌’ ಕಾಮಗಾರಿ ವಿರೋಧಿಸುತ್ತಿರುವ ‘ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ (ಬಿಎಲ್‌ಎ)‘ ಚೀನಾ ಧೂತವಾಸ ಕಚೇರಿ ಮೇಲೆ ದಾಳಿ ನಡೆಸಿದೆ.

Team Samachara

ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆದಿದೆ. ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ (ಬಿಎಲ್‌ಎ) ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ. ದಾಳಿಯಲ್ಲಿ ಇಬ್ಬರು ಪೊಲೀಸರು ಅಸುನೀಗಿದ್ದು, ಮೂವರು ಬಂಡುಕೋರರೂ ಸಾವನ್ನಪ್ಪಿದ್ದಾರೆ.

ದಾಳಿಯ ಹೊಣೆ ಹೊತ್ತಿರುವ ಬಿಎಲ್‌ಎ, ‘ಚೀನಾ ನಮ್ಮ ದೇಶದ ಸಂಪತ್ತನ್ನು ದೋಚುತ್ತಿದೆ’ ಎಂದು ದೂರಿದೆ. ಈ ಕಾರಣಕ್ಕಾಗಿ ನಾವು ದಾಳಿ ನಡೆಸಿದ್ದಾಗಿ ಸಮರ್ಥಿಸಿಕೊಂಡಿದೆ. “ಶಸ್ತ್ರಾಸ್ತ್ರಗಳು, ಗ್ರೆನೇಡ್‌ಗಳೊಂದಿಗೆ ಮೂವರು ದಾಳಿ ನಡೆಸಿದ್ದಾಗಿ,” ಬಿಎಲ್‌ಎ ವಕ್ತಾರ ಜಿಹಾಂದ್‌ ಬಲೋಚ್‌, ‘ಅಲ್‌ಜಝೀರಾ’ಗೆ ತಿಳಿಸಿದ್ದಾರೆ.

ಮುಸ್ಲಿಂರ ಪವಿತ್ರ ದಿನವಾದ ಶುಕ್ರವಾರ ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿರುವ ಚೀನಾ ದೂತವಾಸ ಕಚೇರಿ ಮೇಲೆ ನಡೆದ ದಾಳಿ ಇದು. ಬಿಗಿ ಪಹರೆ ಹೊಂದಿರುವ ಕಚೇರಿಯ ಬಳಿ ಮೂವರು ಗ್ರೆನೇಡ್‌ ಎಸೆದಿದ್ದಾರೆ. ಈ ಸಮಯದಲ್ಲಿ ಗುಂಡಿನ ಚಕಮಕಿಯೂ ನಡೆದಿದೆ. “ಓರ್ವ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಬಂಡುಕೋರರನ್ನು ಹೊಡೆದು ಉರುಳಿಸಿದ್ದೇವೆ,’’ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಜಾವೇದ್‌ ಅಲಂ ಓಧೋ ‘ಎಎಫ್‌ಪಿ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದಾಳಿ ಕುರಿತು ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ದಾಳಿಗೆ ಕಾರಣ, ಚೀನಾ ಎಕಾನಾಮಿಕ್‌ ಕಾರಿಡಾರ್‌:

ಪಾಕಿಸ್ತಾನದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯ ಬಲೂಚಿಸ್ತಾನ. ಭಾರತದಲ್ಲಿ ಜಮ್ಮು- ಕಾಶ್ಮೀರ ಇದ್ದಂತೆ ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಇದೆ. ಇಲ್ಲಿ ಪ್ರತ್ಯೇಕತೆಯ ಹೋರಾಟವೊಂದು ಸ್ವಾತಂತ್ರ್ಯ ನಂತರ ಜಾರಿಯಲ್ಲಿದೆ. ಅಂತಹ ಪ್ರತ್ಯೇಕತೆಯ ಶಸಸ್ತ್ರ ಹೋರಾಟವನ್ನು ಮುನ್ನಡೆಸಿಕೊಂಡು ಬಂದಿರುವ ಪೈಕಿ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಈಗ ಬೃಹತ್ ಕಾರ್ಪೊರೇಟ್ ಯೋಜನೆಯೊಂದರ ವಿರುದ್ಧ ಹೋರಾಟ ಘೋಷಿಸಿದೆ.

ಬಲೂಚಿಸ್ತಾನದಲ್ಲಿ ‘ಚೀನಾ ಪಾಕಿಸ್ತಾನ ಎಕಾನಾಮಿಕ್‌ ಕಾರಿಡಾರ್‌’ ಯೋಜನೆ ಭಾಗವಾಗಿ ಹೆದ್ದಾರಿಯ ಕಾಮಗಾರಿ ಆರಂಭಗೊಂಡಿದೆ. ಇದು ಚೀನಾ ಕ್ಸಿಂಜಿಯಾಂಗ್‌ ಪ್ರಾಂತ್ಯದಿಂದ ಆರಂಭಗೊಂಡು ಬಲೂಚಿಸ್ತಾನದ ಮೂಲಕ ಹಾದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಆರಂಭದಿಂದಲೂ ಈ ಹೆದ್ದಾರಿಯನ್ನು ಬಂಡುಕೋರ ಸಂಘಟನೆ ವಿರೋಧಿಸುತ್ತಿದ್ದು ಹಲವು ಬಾರಿ ಕಾಮಗಾರಿಗಳ ಮೇಲೆ ದಾಳಿ ನಡೆಸಿದೆ. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಂಡುಕೋರರು ಚೀನಾ ದೂತಾವಾಸ ಕಚೇರಿಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಪಾಕಿಸ್ತಾನದ ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಜುಮಾ ಬಜಾರ್‌ನಲ್ಲಿಯೂ ಮತ್ತೊಂದು ಸ್ಫೋಟ ನಡೆದಿದೆ. ಈ ಕುರಿತೂ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಈ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.