ಎಸ್‌ಒಎಸ್‌ ಸಂಸ್ಥೆಯಿಂದ ಹೀಗೊಂದು ವಿಶಿಷ್ಟ ಮಕ್ಕಳ ದಿನಾಚರಣೆ
ಸುದ್ದಿ ಸಾರ

ಎಸ್‌ಒಎಸ್‌ ಸಂಸ್ಥೆಯಿಂದ ಹೀಗೊಂದು ವಿಶಿಷ್ಟ ಮಕ್ಕಳ ದಿನಾಚರಣೆ

ಬೆಂಗಳೂರಿನಲ್ಲಿ ವೀವರ್ಸ್‌ ಕಾಲೊನಿಯ ಚಿಗುರು ಬಾಲ ಪಂಚಾಯಿತಿಯ ಮಕ್ಕಳು ‘ನಾವು ಮಕ್ಕಳು’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು.

ನವೆಂಬರ್ 14 ದೇಶಕ್ಕೆ ಮಕ್ಕಳ ದಿನಾಚರಣೆಯಾದರೆ ನವೆಂಬರ್‌ 20 ವಿಶ್ವ ಮಕ್ಕಳ ದಿನಾಚರಣೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿಯೂ ಶಾಖೆಯನ್ನು ಹೊಂದಿರುವ ವಿಶ್ವದ ಪ್ರಖ್ಯಾತ ಶಿಶುಪಾಲನಾ ಸಂಸ್ಥೆಯಾದ ಎಸ್‌ಒಎಸ್‌ ಈ ದಿನವನ್ನು ವಿಶಿಷ್ಟವಾಗಿ ಆಚರಿಸಿತು.

ಸಂಸ್ಥೆಯ ವತಿಯಿಂದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂರಕ್ಷಣೆಯ ಕುರಿತು ಬೀದಿ ನಾಟಗಳನ್ನು ರಚಿಸಿ ಅವುಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಯಿತು. ಎಸ್‌ಒಎಸ್‌ ಸಂಸ್ಥೆ ಭಾರತದ 22 ರಾಜ್ಯಗಳಲ್ಲಿ 33 ಸಂಸ್ಥೆಗಳನ್ನು ಹೊಂದಿದ್ದು ಈ ಎಲ್ಲಾ ಸಂಸ್ಥೆಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತನ್ನ ಶಾಖೆಗಳಿರುವ ಎಲ್ಲಾ ಪ್ರದೇಶಗಳಲ್ಲೂ ಬಾಲ ಪಂಚಾಯಿತಿಗಳನ್ನು ರಚಿಸಲಾಗಿದ್ದು. ಈ ಪಂಚಾಯಿತಿಯ ಸದಸ್ಯರು ಬೀದಿ ನಾಟಕಗಳನ್ನು ಪ್ರದರ್ಶನ ಮಾಡಿದರು.

ಬೆಂಗಳೂರಿನಲ್ಲಿ ವೀವರ್ಸ್‌ ಕಾಲೊನಿಯ ಚಿಗುರು ಬಾಲ ಪಂಚಾಯಿತಿಯ ಮಕ್ಕಳು ‘ನಾವು ಮಕ್ಕಳು’ ಎಂಬ ನಾಟಕವನ್ನು ಪ್ರದರ್ಶಿಸಿದರು. ಮಕ್ಕಳ ಬೆಳವಣಿಗೆಯಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಕುರಿತು ಅರಿವು ಮೂಡಿಸುವ ಹಾಗೂ ಎಚ್ಚರಿಸುವ ಪ್ರಯತ್ನ ಇದಾಗಿತ್ತು.

ಕೋಣನಕುಂಟೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರು ತಮ್ಮ ಮಕ್ಕಳಿಗೆ ಭದ್ರತೆಯನ್ನು ಹಾಗೂ ಉತ್ತಮ ಭವಿಷ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡುವ ಪ್ರತಿಜ್ಞೆಯನ್ನು ಇದೇ ಸಂದರ್ಭದಲ್ಲಿ ತೆಗೆದುಕೊಂಡರು.

ಎಸ್‌ಒಎಸ್‌ ಸಂಸ್ಥೆಯಿಂದ ಹೀಗೊಂದು ವಿಶಿಷ್ಟ ಮಕ್ಕಳ ದಿನಾಚರಣೆ

ಏನಿದು ಎಸ್‌ಒಎಸ್‌?

ಎರಡನೇ ಮಹಾಯುದ್ಧ ಮುಗಿದ ಬಳಿಕ ಅನಾಥರಾದ ಮಕ್ಕಳ ಆರೈಕೆಗಾಗಿ 1949ರಲ್ಲಿ ಆಸ್ಟ್ರೀಯಾದಲ್ಲಿ ಹರ್ಮನ್‌ ಗೇಯ್ನರ್ ಸ್ಥಾಪಿಸಿದ ಸಂಸ್ಥೆಯೇ ಎಸ್‌ಒಎಸ್‌. ಇವತ್ತಿಗೆ ಸಂಸ್ಥೆ ವಿಶ್ವದ ಅತ್ಯಂತ ದೊಡ್ಡ ಲಾಭ ರಹಿತ ಅಭಿವೃದ್ಧಿ ಸಂಸ್ಥೆ ಎಂದು ಹೆಸರು ಪಡೆದುಕೊಂಡಿದ್ದು 135 ದೇಶಗಳಲ್ಲಿ ಕಾರ್ಯಚರಿಸುತ್ತಿದೆ.

ಭಾರತದ ಎಸ್‌ಒಎಸ್‌ ಬಾಲಗ್ರಾಮ (ಚಿಲ್ಡ್ರನ್ಸ್‌ ವಿಲೇಜ್‌) 1964 ಆರಂಭಿಸಲ್ಪಟ್ಟಿತು. ಹೆತ್ತವರನ್ನು ಕಳೆದುಕೊಂಡ, ಕುಟುಂಬದವರಿಂದ ತ್ಯಜಿಸಲ್ಪಟ್ಟ ಮತ್ತು ನಿರ್ಗತಿಕ ಮಕ್ಕಳಿಗೆ ‘ಕುಟುಂಬ ಆಧಾರಿತ ಆರೈಕೆ’ ಮೂಲಕ ಸಂಸ್ಥೆ ಪೋಷಣೆ ನೀಡುತ್ತಿದೆ. ಈ ಮೂಲಕ ಮಕ್ಕಳನ್ನು ಪ್ರೀತಿ, ಗೌರವ ಮತ್ತು ಭದ್ರತೆ ಮೂಲಕ ಬೆಳೆಸುವುದು ಈ ಸಂಸ್ಥೆಯ ವಿಶಿಷ್ಟ ಪರಿಕಲ್ಪನೆಯಾಗಿದೆ.

ಇದಲ್ಲದೆ ಕುಟುಂಬ ಸಬಲೀಕರಣ ಕಾರ್ಯಕ್ರಮವನ್ನೂ ಸಂಸ್ಥೆ ನಡೆಸುತ್ತಿದ್ದು ಎಸ್‌ಒಎಸ್‌ ಗ್ರಾಮದ 40 ಕಿ.ಮೀ. ಆಸುಪಾಸಿನ ಸಂಕಷ್ಟದಲ್ಲಿರುವ ಮಹಿಳೆಯರು, ವಿಧವೆಯರು, ವಿಚ್ಛೇದಿತ ಮಹಿಳೆಯರು ನಿರ್ವಹಿಸುತ್ತಿರುವ ಕುಟುಂಬಗಳ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಗೆ ಸಹಕಾರ ನೀಡುತ್ತಿದೆ.