samachara
www.samachara.com
 ಕಣಿವೆ ರಾಜ್ಯದಲ್ಲಿ ಕುದುರಿದ ಮಹಾಮೈತ್ರಿ, ಸದ್ಯದಲ್ಲೇ ಕಾಂಗ್ರೆಸ್‌-ಪಿಡಿಪಿ-ಎನ್‌ಸಿ ಸರಕಾರ ಅಸ್ತಿತ್ವಕ್ಕೆ
ಸುದ್ದಿ ಸಾರ

ಕಣಿವೆ ರಾಜ್ಯದಲ್ಲಿ ಕುದುರಿದ ಮಹಾಮೈತ್ರಿ, ಸದ್ಯದಲ್ಲೇ ಕಾಂಗ್ರೆಸ್‌-ಪಿಡಿಪಿ-ಎನ್‌ಸಿ ಸರಕಾರ ಅಸ್ತಿತ್ವಕ್ಕೆ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅವಧಿ ಆರು ವರ್ಷಗಳಾಗಿದ್ದು, ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಅಲ್ಲಿಯವರೆಗೆ ಮೈತ್ರಿ ಸರಕಾರ ಅಧಿಕಾರ ಚಲಾಯಿಸಬಹುದಾಗಿದೆ.

Team Samachara

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಕುದುರಿದೆ. ಕಾಂಗ್ರೆಸ್‌, ಪೀಪಲ್‌ ಡೆಮಾಕ್ರಾಟಿಕ್‌ ಪಾರ್ಟಿ (ಪಿಡಿಪಿ) ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮೈತ್ರಿಕೂಟ ರಚಿಸುವ ತೀರ್ಮಾನಕ್ಕೆ ಬಂದಿವೆ.

ಮೈತ್ರಿಯಂತೆ ಪಿಡಿಪಿ ನಾಯಕ ಮಾಜಿ ಹಣಕಾಸು ಸಚಿವ ಅಲ್ತಾಫ್‌ ಬುಖಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಎನ್‌ಸಿ ನಾಯಕ ಓಮರ್‌ ಅಬ್ದುಲ್ಲಾ ಅವರಿಗೆ ಮೈತ್ರಿಯ ನೇತೃತ್ವ ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಆದರೆ ಓಮರ್‌ ಅಬ್ದುಲ್ಲಾ ಇದರಿಂದ ಹಿಂದೆ ಸರಿದಿದ್ದು, ‘ಎನ್‌ಸಿ ಸರಕಾರದ ಭಾಗವಾಗುವುದಿಲ್ಲ. ಕಾಂಗ್ರೆಸ್‌ ಪಿಡಿಪಿ ಮೈತ್ರಿಗೆ ಬಾಹ್ಯ ಬೆಂಬಲ ನೀಡಲಿದೆ’ ಎಂದು ಹೇಳಿದ್ದಾರೆ. ಹೀಗಾಗಿ ಬುಖಾರಿ ಮುಖ್ಯಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

‘ಮೈತ್ರಿಕೂಟ ರಚನೆಯ ಮಾತುಕತೆಗಳು ಪೂರ್ಣಗೊಂಡಿದ್ದು ಇಂದು ಸಂಜೆ ಅಧಿಕೃತ ಘೋಷಣೆ ಹೊರ ಬೀಳಲಿದೆ’ ಎಂಬ ಹಿರಿಯ ಪಿಡಿಪಿ ನಾಯಕರ ಹೇಳಿಕೆಯನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳಲು ಎರಡೂ ಬದ್ಧ ವೈರಿ ಪಕ್ಷಗಳು ಒಂದಾಗಿದ್ದೇವೆ ಎಂದು ಎನ್‌ಸಿ ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜನೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆಗಳಿರುವುದರಿಂದ ಇಂಥಹದ್ದೊಂದು ತೀರ್ಮಾನವನ್ನು ಸೂಕ್ತ ಸಂದರ್ಭದಲ್ಲಿ ತೆಗೆದುಕೊಂಡಿರುವುದಾಗಿ ಆ ಹಿರಿಯ ನಾಯಕರು ವಿವರಿಸಿದ್ದಾರೆ.

ಸದ್ಯ 87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತಕ್ಕೆ 44 ಸದಸ್ಯರು ಬೇಕಾಗಿದ್ದಾರೆ. ಪಿಡಿಪಿ ಬಳಿ 28 ಶಾಸಕರಿದ್ದರೆ, ಎನ್‌ಸಿ ಬಳಿ 15 ಜನ ಮತ್ತು ಕಾಂಗ್ರೆಸ್ ಬಳಿ 12 ಜನ ಸದಸ್ಯರಿದ್ದಾರೆ. ಮೂರೂ ಪಕ್ಷಗಳು ಒಟ್ಟಾದರೆ ಸದಸ್ಯ ಬಲ 55ಕ್ಕೆ ಏರಿಕೆಯಾಗಲಿದ್ದು ಮೈತ್ರಿಕೂಟ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ.

ಅಂದ ಹಾಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅವಧಿ ಆರು ವರ್ಷಗಳಾಗಿದ್ದು, ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಅಲ್ಲಿಯವರೆಗೆ ಮೈತ್ರಿ ಸರಕಾರ ಅಧಿಕಾರ ಚಲಾಯಿಸಬಹುದಾಗಿದೆ.