ಸಿಎನ್‌ಎನ್‌ ಹೋರಾಟಕ್ಕೆ ಮಣಿದ ವೈಟ್‌ಹೌಸ್‌, ಮತ್ತೆ ಅಕಾಸ್ಟಾ-ಟ್ರಂಪ್‌ ಮುಖಾಮುಖಿ
ಸುದ್ದಿ ಸಾರ

ಸಿಎನ್‌ಎನ್‌ ಹೋರಾಟಕ್ಕೆ ಮಣಿದ ವೈಟ್‌ಹೌಸ್‌, ಮತ್ತೆ ಅಕಾಸ್ಟಾ-ಟ್ರಂಪ್‌ ಮುಖಾಮುಖಿ

ಸೋಮವಾರ ಪ್ರಕಟಣೆ ಹೊರಡಿಸಿರುವ ಟ್ರಂಪ್‌ ಆಡಳಿತ ಅಕಾಸ್ಟಾ ಶ್ವೇತಭವನ  ಪ್ರವೇಶಕ್ಕೆ ಅನುಮತಿ ನೀಡುತ್ತಿರುವುದಾಗಿ ಘೋಷಿಸಿದೆ.

ಸಿಎನ್‌ಎನ್‌ ಮತ್ತು ಅಮೆರಿಕಾದ ಮಾಧ್ಯಮಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಸಿಎನ್ಎನ್‌ನ ಹಿರಿಯ ಪತ್ರಕರ್ತ ಜಿಮ್‌ ಅಕಾಸ್ಟಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಶ್ವೇತಭವನ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅಕಾಸ್ಟಾ ಮುಖಾಮುಖಿ ಮತ್ತೆ ನಡೆಯಲಿದೆ.

ಸೋಮವಾರ ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಟ್ರಂಪ್‌ ಆಡಳಿತ ಅಕಾಸ್ಟಾ ಪ್ರವೇಶಕ್ಕೆ ಅನುಮತಿ ನೀಡುತ್ತಿರುವುದಾಗಿ ಘೋಷಿಸಿದೆ. ಆದರೆ ಇದೇ ವೇಳೆ ಮುಂದಿನ ಪತ್ರಿಕಾಗೋಷ್ಠಿಗಳಿಗೆ ವಿಶೇಷ ನಿಯಮಗಳನ್ನು ವೈಟ್‌ಹೌಸ್‌ ರೂಪಿಸಿದೆ.

ಈ ಕುರಿತು ಶ್ವೇತ ಭವನದ ಅಧಿಕಾರಿಗಳಾದ ಸಾರಾ ಸ್ಯಾಂಡರ್ಸ್‌ ಮತ್ತು ಬಿಲ್‌ ಶೈನ್‌ ಅಕಾಸ್ಟಾರಿಗೆ ಪತ್ರವನ್ನು ಬರೆದಿದ್ದಾರೆ. ಮುಂದಿನ ಪತ್ರಿಕಾಗೋ‍ಷ್ಠಿಗಳಲ್ಲಿ ಒಬ್ಬರು ಪತ್ರಕರ್ತರು ಒಂದೇ ಪ್ರಶ್ನೆಯನ್ನು ಕೇಳಬೇಕು. ಅದಕ್ಕೆ ಸಂಬಂಧಿಸಿದ ಮರು ಪ್ರಶ್ನೆ ಕೇಳಬೇಕಾ ಬೇಡವಾ ಎಂಬುದು ಅಧ್ಯಕ್ಷರು ಮತ್ತು ಸಿಬ್ಬಂದಿಗಳ ವಿವೇಚನೆಗೆ ಬಿಟ್ಟದ್ದ ಎಂಬ ಷರತ್ತನ್ನು ಶ್ವೇತ ಭವನ ವಿಧಿಸಿದೆ. ಈ ನಿಯಮಗಳಿಗೆ ತಪ್ಪಿದರೆ ಪ್ರವೇಶ ಪತ್ರಗಳನ್ನು ಹಿಂಪಡೆಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅಕಾಸ್ಟಾರಿಗೆ ನೀಡಲಾಹಿದೆ.

ಈ ಘಟನೆ ಬೆನ್ನಲ್ಲೇ ಟ್ಟೀಟ್‌ ಮಾಡಿರುವ ಸಿಎನ್‌ಎನ್‌ ಜಯ ಸಾಧಿಸಿರುವುದಾಗಿ ಘೋಷಿಸಿದೆ. ‘ಅಕಾಸ್ಟಾರಿಗೆ ಪ್ರೆಸ್‌ ಪಾಸ್‌ ಮತ್ತೆ ನೀಡಿರುವುದರಿಂದ ನಮ್ಮ ಕಾನೂನು ಹೋರಾಟ ನಿಲ್ಲಲಿದೆ. ಶ್ವೇತ ಭವನದ ವರದಿಗಾರಿಯನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಟ್ಟೀಟ್‌ನಲ್ಲಿ ಸಿಎನ್‌ಎನ್‌ ಹೇಳಿದೆ.

ಇದಕ್ಕೂ ಮೊದಲು ಕಳೆದ ಶುಕ್ರವಾರ ವಾಷಿಂಗ್ಟನ್‌ ಡಿಸಿಯ ಜಿಲ್ಲಾ ನ್ಯಾಯಾಧೀಶರು ತಾತ್ಕಾಲಿಕವಾಗಿ ಜಿಮ್‌ ಅಕಾಸ್ಟಾ ಪ್ರವೇಶ ಪತ್ರವನ್ನು ವಾಪಸ್‌ ನೀಡುವಂತೆ ಶ್ವೇತ ಭವನಕ್ಕೆ ಆದೇಶ ನೀಡಿದ್ದರು. ಇದಾದ ಬೆನ್ನಿಗೆ ಇದೀಗ ಶ್ವೇತ ಭವನ ಕೆಲವು ಷರತ್ತುಗಳನ್ನು ವಿಧಿಸಿ ಪ್ರವೇಶ ಪತ್ರವನ್ನು ವಾಪಸ್‌ ಮಾಡಿದೆ. ಇದು ಟ್ರಂಪ್‌ ಸರಕಾರಕ್ಕಾದ ಅತೀ ದೊಡ್ಡ ಮುಖಭಂಗ ಎಂಬ ಚರ್ಚೆಗಳು ಅಮೆರಿಕಾದಲ್ಲಿ ನಡೆಯುತ್ತಿವೆ.

ಅಮೆರಿಕಾದ ಮಧ್ಯಂತರ ಚುನಾವಣೆ ಮುಗಿದ ಬಳಿಕ ನವೆಂಬರ್‌ 7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಮ್ ಅಕಾಸ್ಟಾ ಮತ್ತು ಟ್ರಂಪ್‌ ನಡುವೆ ಕಾವೇರಿದ ಚರ್ಚೆ ನಡೆದಿತ್ತು. ಇದಾದ ಬಳಿಕ ಅಕಾಸ್ಟಾ ಪ್ರವೇಶ ಪತ್ರಗಳನ್ನು ರದ್ದುಗೊಳಿಸಲಾಗಿತ್ತು. ಇದರ ವಿರುದ್ಧ ಅಮೆರಿಕಾದ ಹಲವು ಮಾಧ್ಯಮಗಳು ಧ್ವನಿ ಎತ್ತಿದ್ದವು. ಇದೀಗ ಸಂಘಟಿತ ಹೋರಾಟ ಫಲ ನೀಡಿದ್ದು ಟ್ರಂಪ್‌ ಸಾರ್ವಜನಿಕರ ಒತ್ತಡಕ್ಕೆ ಮಣಿದಿದ್ದಾರೆ.