
1984 ಸಿಖ್ ವಿರೋಧಿ ಗಲಭೆ: ಓರ್ವನಿಗೆ ಗಲ್ಲು, ಮತ್ತೋರ್ವನಿಗೆ ಜೀವಾವಧಿ ಶಿಕ್ಷೆ
ಇಬ್ಬರು ಸಿಖ್ಖರನ್ನು ಹತ್ಯೆಗೊಳಿಸಿದ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾದ ಇಬ್ಬರಲ್ಲಿ ಒಬ್ಬರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದರೆ, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಪ್ರಕಟಿಸಿದೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ಹುಟ್ಟಿಕೊಂಡ 1984ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಮೊದಲ ಗಲ್ಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಪ್ರಕಟಿಸಿದೆ. ಕಾಕತಾಳಿಯವೆಂದರೆ ಇಂದಿರಾ ಗಾಂಧಿಯವರ 101ನೇ ಜನ್ಮದಿನದ ಮರುದಿನ ಈ ಶಿಕ್ಷೆ ಪ್ರಕಟಗೊಂಡಿದೆ.
ಇಬ್ಬರು ಸಿಖ್ಖರನ್ನು ಹತ್ಯೆಗೊಳಿಸಿದ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾದ ಇಬ್ಬರಲ್ಲಿ ಒಬ್ಬರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದರೆ, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಪ್ರಕಟಿಸಿದೆ. ಗಲಭೆ ಸಂದರ್ಭದಲ್ಲಿ ನರೇಶ್ ಸೆಹ್ರಾವತ್ ಮತ್ತು ಯಶ್ಪಾಲ್ ಸಿಂಗ್ ದೆಹಲಿಯ ಮಹಿಪಲ್ಪುರ್ನಲ್ಲಿ ಇಬ್ಬರು ಸಿಖ್ಖರನ್ನು ಕೊಲೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆದು ಇವರಿಬ್ಬರು ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಯಶ್ಪಾಲ್ ಸಿಂಗ್ಗೆ ಗಲ್ಲುಶಿಕ್ಷೆ ವಿಧಿಸಿದೆ. ಯಶ್ಪಾಲ್ 1984ರ ಸಿಖ್ ಗಲಭೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗುತ್ತಿರುವ ಮೊದಲ ಆರೋಪಿಯಾಗಿದ್ದಾರೆ. ಯಶ್ಪಾಲ್ ಮತ್ತು ನರೇಶ್ ಇಬ್ಬರಿಗೂ ಹೈಕೋರ್ಟ್ ಇದೇ ವೇಳೆ ತಲಾ 35 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅದು ನವೆಂಬರ್ 1, 1984…
ಅಂದು ಹರ್ದೇವ್ ಸಿಂಗ್ ಮತ್ತು ಇಬ್ಬರು ದೆಹಲಿಯ ಮಹಿಪಲ್ಪುರ್ನಲ್ಲಿರುವ ತಮ್ಮ ಕಿರಾಣಿ ಅಂಗಡಿಯಲ್ಲಿದ್ದರು. ಈ ವೇಳೆ ಅಲ್ಲಿಗೆ ಕೈಯಲ್ಲಿ ಕಬ್ಬಿಣದ ರಾಡ್, ಹಾಕಿ ಸ್ಟಿಕ್, ಕಲ್ಲು, ಸೀಮೆ ಎಣ್ಣೆ ಹಿಡಿದು ಬಂದ ಗುಂಪೊಂದು ಅವರ ಮೇಲೆ ದಾಳಿ ನಡೆಸಿ ಅಂಗಡಿಗೆ ಬೆಂಕಿ ಇಟ್ಟಿತ್ತು.
ಅಲ್ಲಿಂದ ಅವತಾರ್ ಸಿಂಗ್ ಮನೆಗೆ ಓಡಿದ ಗುಂಪು ಅಲ್ಲಿಯೂ ಮನೆಗೆ ಬೆಂಕಿ ಹಾಕಿತ್ತು. ಈ ದಾಳಿಯಲ್ಲಿ ಅವತಾರ್ ಮತ್ತು ಹರ್ದೇವ್ ಇಬ್ಬರೂ ಅಸು ನೀಗಿದರು.
ಇವುಗಳ ತನಿಖೆಗಾಗಿ 2015ರಲ್ಲಿ ನೇಮಿಸಿದ ವಿಶೇಷ ತನಿಖಾ ತಂಡ ಒಟ್ಟು 293 ಪ್ರಕರಣಗಳಲ್ಲಿ 60 ಪ್ರಕರಣಗಳನ್ನು ಮರು ತನಿಖೆಗೆ ಕೈಗೆತ್ತಿಕೊಂಡಿತ್ತು. ಇದರಲ್ಲಿ ಮೊದಲ ಪ್ರಕರಣದ ತನಿಖೆ ಯಶಸ್ವಿಯಾಗಿ ಆರೋಪಿಗಳು ದೋಷಿ ಎಂದು ಕಳೆದ ವಾರ ತೀರ್ಪು ನೀಡಲಾಗಿತ್ತು.
ಒಟ್ಟು 60ರಲ್ಲಿ 52 ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ತಂಡ ‘ಅನ್ಟ್ರೇಸೇಬಲ್ ರಿಪೋರ್ಟ್’ ನೀಡಿದೆ. ಉಳಿದ 8ರಲ್ಲಿ 5ರಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇನ್ನುಳಿದ ಮೂರರಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಬೇಕಿದ್ದು ಇದರಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಓರ್ವ ಆರೋಪಿಯಾಗಿದ್ದಾರೆ.
ದಾಖಲೆಗಳ ಪ್ರಕಾರ 31 ಅಕ್ಟೋಬರ್ 1984ರಂದ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ನಡೆದ ಗಲಭೆಯಲ್ಲಿ 2,800 ಕ್ಕೂ ಅಧಿಕ ಸಿಖ್ಖರು ಕೊಲೆಯಾಗಿದ್ದಾರೆ. ಸಿಖ್ ಅಂಗರಕ್ಷಕರು ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿಗಳು ನಡೆದಿತ್ತು. ಇದೀಗ ಗಲಭೆ ನಡೆದು ಬರೋಬ್ಬರಿ 34 ವರ್ಷಗಳ ನಂತರವೂ ಕೆಲವು ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ.