samachara
www.samachara.com
ಮತ್ತೆ ಭುಗಿಲೆದ್ದ ಶಬರಿಮಲೆ ಪ್ರತಿಭಟನೆ, ತಡರಾತ್ರಿ 70 ಜನರ ಬಂಧನ 
ಸುದ್ದಿ ಸಾರ

ಮತ್ತೆ ಭುಗಿಲೆದ್ದ ಶಬರಿಮಲೆ ಪ್ರತಿಭಟನೆ, ತಡರಾತ್ರಿ 70 ಜನರ ಬಂಧನ 

ಸದ್ಯಕ್ಕೆ ಶಬರಿಮಲೆ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.

Team Samachara

ಒಂದು ಹಂತಕ್ಕೆ ತಣ್ಣಗಾಗಿದ್ದ ಶಬರಿಮಲೆ ವಿವಾದ ಮತ್ತೆ ಭುಗಿಲೆದ್ದಿದೆ. ಶಬರಿಮಲೆಯಲ್ಲಿ ಭಾನುವಾರ ತಡ ರಾತ್ರಿ ನಡೆದ ಮಿಂಚಿನ ಬೆಳವಣಿಗೆಯಲ್ಲಿ 70 ಜನರನ್ನು ಬಂಧಿಸಲಾಗಿದ್ದು, ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ನಾಂದಿಯಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಿವಾಸ ಸೇರಿ ಕೇರಳದ ಹಲವು ಪ್ರದೇಶಗಳಲ್ಲಿ ಇಂದು ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ನಿನ್ನೆ ರಾತ್ರಿ 11 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಿದ ಬಳಿಕ ಇರುಮುಡಿ ಕಟ್ಟನ್ನು ತಲೆ ಮೇಲೆ ಹೊತ್ತಿದ್ದ 100 ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದರು. ನಿರ್ಬಂಧವನ್ನು ವಾಪಸ್‌ ಪಡೆದುಕೊಳ್ಳಬೇಕು ಮತ್ತು ಸ್ಥಳದಲ್ಲಿರುವ ಪೊಲೀಸ್‌ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು. ಜತೆಗೆ ದೇವಸ್ಥಾನದ ಆವರಣದಲ್ಲಿ ರಾತ್ರಿಯ ಉಳಿಯುವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು 70 ಜನರನ್ನು ವಶಕ್ಕೆ ಪಡೆದಿದ್ದು, 200 ಜನರ ಮೇಲೆ ಗಲಭೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಲಪಂಥೀಯ ಸಂಘನೆಗಳಿಗೆ ಸೇರಿದ ಕಾರ್ಯಕರ್ತರು ರಾತೋ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಜತೆಗೆ ಕೊಚ್ಚಿ, ಕೋಝಿಕ್ಕೋಡ್‌, ಮಲಪ್ಪುರಂ, ಅರ್ನಮುಲ, ಕೊಲ್ಲಂ, ಅಲಪುಝ, ರಣ್ಣಿ, ತೋಡುಪುಝ, ಕಾಲಡಿ ಮತ್ತು ಇಡುಕ್ಕಿಯಲ್ಲಿ ಇಂದು ಮುಂಜಾನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿಂದೆ ಶಬರಿಮಲೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ದೇವಳದ ಒಳಾಂಗಣ ಪ್ರದೇಶದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರು. ಇಲ್ಲಿ ರಾತ್ರಿ ಉಳಿಯಲು ಯಾರನ್ನೂ ಬಿಡುತ್ತಿಲ್ಲ. ಆದರೆ, “ನಮ್ಮನ್ನು ಉಳಿಯಲು ಬಿಡದಿದ್ದರೆ ತುಪ್ಪದ ಅಭಿಷೇಕವನ್ನು ನೋಡುವುದು ಹೇಗೆ?” ಎಂಬುದು ಭಕ್ತರ ಪ್ರಶ್ನೆಯಾಗಿದೆ.

ಸುಪ್ರಿಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಕ್ಕೆ ತರಲು ಇನ್ನಷ್ಟು ಸಮಯ ಬೇಕು ಎಂದು ಕೋರಿ ಶಬರಿಮಲೆ ದೇವಸ್ಥಾನ ಮಂಡಳಿ ಇಂದು ನ್ಯಾಯಾಲಯಕ್ಕೆ ಪಿಟಿಷನ್‌ ಸಲ್ಲಿಸಲಿದೆ. ಇದಕ್ಕೂ ಮೊದಲು ಈ ಪ್ರತಿಭಟನೆ ನಡೆದಿದೆ.

ಹಿಟ್ಲರ್‌ ಆಡಳಿತ

ಬಿಜೆಪಿ ಪಕ್ಷದ ಹಿರಿಯ ನಾಯಕ ಕೆ. ಸುರೇಂದ್ರನ್‌ ಅವರನ್ನು ರಾಜ್ಯ ಸರಕಾರ ಬಂಧಿಸಿದ್ದು, ಇದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಭಾನುವಾರವೇ ಹಲವು ಕಡೆಗಳಲ್ಲಿ ರಸ್ತೆಗಳನ್ನು ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಪ್ರತಿಭಟನೆ ಇಂದು ಮತ್ತಷ್ಟು ತೀವ್ರಗೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಪಿಎಸ್‌ ಶ್ರೀಧರನ್‌ ಪಿಳ್ಳೈ ಬಂಧನವನ್ನು ಕ್ರೂರ ನಡೆ ಎಂದು ಕರೆದಿದ್ದು ಈ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಬಂಧನ ಮತ್ತು ಕಾರ್ಯಕರ್ತರ ಮೇಲೆ ದಾಖಲಿಸಿರುವ ಕೇಸುಗಳ ಹಿನ್ನೆಲೆಯಲ್ಲಿ, “ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಭಕ್ತರಿಗೆ ದೇವಸ್ಥಾನದತ್ತ ತೆರಳಲು ಅವಕಾಶ ನೀಡುತ್ತಿಲ್ಲ. ಯಾವುದೇ ಕಾರಣವೂ ಇಲ್ಲದೆ ಸೆಕ್ಷನ್‌ 144ನ್ನು ಜಾರಿಗೊಳಿಸಲಾಗಿದೆ. ಭಕ್ತರು ಭಯೋತ್ಪಾದಕರಲ್ಲ. ಇಲ್ಲಿ 15,000 ಪೊಲೀಸರ ಯಾವುದೇ ಅಗತ್ಯವಿಲ್ಲ,” ಎಂದು ಕೇಂದ್ರ ಸಚಿವ ಕೆಜೆ ಅಲ್ಫೋನ್ಸ್‌ ಕಿಡಿಕಾರಿದ್ದಾರೆ.

ಇದೇ ವೇಳೆ ಪ್ರತಿಭಟನೆಯಲ್ಲಿ ತೊಡಗಿದವರನ್ನು ಸಂಘಿಗಳು ಎಂದು ಕರೆಯುವ ಮೂಲಕ ಭಕ್ತರನ್ನು ರಾಜ್ಯ ಸರಕಾರ ಅವಮಾನಿಸಿದೆ ಎಂದಿರುವ ರಾಜ್ಯ ಕಾಂಗ್ರೆಸ್‌ ಮುಖಂಡ ರಮೇಶ್‌ ಚೆನ್ನಿತ್ತಿಲ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಡಳಿತವನ್ನು ಹಿಟ್ಲರ್‌ಗೆ ಹೋಲಿಸಿದ್ದಾರೆ.

ಎಲ್ಲಾ ಬೆಳವಣಿಗೆಗಳ ನಡುವೆ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಲಪಂಥೀಯ ನಾಯಕಿ ಕೆ.ಪಿ ಶಶಿಕಲಾರನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು ಅವರೀಗ ದೇವಸ್ಥಾನದತ್ತ ಹೊರಟಿದ್ದಾರೆ.

ಒಟ್ಟಾರೆ ಸದ್ಯಕ್ಕೆ ಶಬರಿಮಲೆ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.