ಅಮೃತಸರದಲ್ಲಿ ಗ್ರೆನೇಡ್‌ ದಾಳಿಗೆ ಮೂವರು ಬಲಿ, ಉಗ್ರರ ಕೈವಾಡದ ಶಂಕೆ
ಸುದ್ದಿ ಸಾರ

ಅಮೃತಸರದಲ್ಲಿ ಗ್ರೆನೇಡ್‌ ದಾಳಿಗೆ ಮೂವರು ಬಲಿ, ಉಗ್ರರ ಕೈವಾಡದ ಶಂಕೆ

ಈ ದಾಳಿಯಲ್ಲಿ ಖಲಿಸ್ತಾನ್‌ ಮತ್ತು ಕಾಶ್ಮೀರ ಭಯೋತ್ಪಾದಕ ಸಂಘಟನೆಗಳ ಕೈವಾಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಅಮರಿಂದರ್‌ ಸಿಂಗ್ ಹೇಳಿದ್ದಾರೆ.

ಅಮೃತಸರದಲ್ಲಿ ಧಾರ್ಮಿಕ ಕಾರ್ಯಕ್ರಮದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಮೂವರು ಅಸುನೀಗಿದ್ದಾರೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿ ಬಗ್ಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದ್ದು, ‘ರಾಜ್ಯದಲ್ಲಿ ಕಷ್ಟಪಟ್ಟು ಸ್ಥಾಪಿಸಿದ ಶಾಂತಿಯನ್ನು ಭಂಗಗೊಳಿಸಲು ಭಯೋತ್ಪಾದನಾ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ,’ ಎಂದು ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಗುಡುಗಿದ್ದಾರೆ.

‘ಘಟನೆ ಬಗ್ಗೆ ಜನರು ಗಾಬರಿಗೊಳ್ಳಬಾರದು. ಶಾಂತಿಯಿಂದ ಇರಬೇಕು,’ ಎಂದು ಅವರು ಇದೇ ವೇಳೆ ಟ್ಟಿಟ್ಟರ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ದಾಳಿಯಲ್ಲಿ ಖಲಿಸ್ತಾನ್‌ ಮತ್ತು ಕಾಶ್ಮೀರ ಭಯೋತ್ಪಾದಕ ಸಂಘಟನೆಗಳ ಕೈವಾಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಮರಿಂದರ್‌ ಸಿಂಗ್‌ ಟ್ಟೀಟ್‌ ಹೊರಬಿದ್ದ ಬೆನ್ನಲ್ಲೇ ಮಾತನಾಡಿರುವ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಸುರೇಶ್‌ ಅರೋರಾ, ಇದು ಭಯೋತ್ಪಾದಕರ ದಾಳಿಯಂತೆ ಭಾಸವಾಗುತ್ತಿದೆ. ಭಯೋತ್ಪಾದನಾ ದಾಳಿ ಎಂದೇ ನಾವಿದನ್ನು ತನಿಖೆಗೆ ಒಳಪಡಿಸಲಿದ್ದೇವೆ ಎಂದು ಹೇಳಿದ್ದಾರೆ.

ಘಟನಾ ಸ್ಥಳಕ್ಕ ರಾಜ್ಯ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ವಿವಿಧ ತಂಡಗಳು ಬೇರೆ ಬೇರೆ ಕೋನಗಳಿಂದ ದಾಳಿಯ ತನಿಖೆಗೆ ಇಳಿದಿವೆ. ದಾಳಿ ಬೆನ್ನಿಗೆ ರಾಜ್ಯದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮದ ಮೇಲೆ ದಾಳಿ

ಇಂದು ಬೆಳಿಗ್ಗೆ ಅಮೃತಸರದ ರಾಜಸಾನ್ಸಿ ಸಮೀಪದಲ್ಲಿರುವ ಆದಿಲ್ವಾಲ ಗ್ರಾಮದ ‘ನಿರಂಕರಿ ಸತ್ಸಂಗ ಭವನ’ದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಭವನದ ಒಳಗೆ ಜನರು ನೆರೆದಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರೆನೇಡ್‌ ತೂರಿ ಪರಾರಿಯಾಗಿದ್ದಾರೆ.

ಪರಿಣಾಮ ಮೂವರು ಸಾವನ್ನಪ್ಪಿ 15 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಐಜಿಪಿ ಎಸ್‌ಎಸ್‌ ಪವಾರ್‌ ಹೇಳಿದ್ದಾರೆ. ಘಟನೆಯಲ್ಲಿ ಸಾವಿಗೀಡಾದವರಿಗೆ ಸಿಎಂ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಹೈ ಅಲರ್ಟ್‌ ಪಂಜಾಬ್‌

ಇತಿಹಾಸದುದ್ದಕ್ಕೂ ಶಸ್ತ್ರ ಸಜ್ಜಿತ ಹೋರಾಟಗಳಿಗೆ ಹೆಸರಾದ ರಾಜ್ಯ ಪಂಜಾಬ್‌ನಲ್ಲಿ, ಕಳೆದ 18 ತಿಂಗಳಲ್ಲಿ ಭಯೋತ್ಪಾದಕರ 15 ದಾಳಿಯ ಸಂಚುಗಳನ್ನು ವಿಫಲಗೊಳಿಸಲಾಗಿತ್ತು. ಜತೆಗೆ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಆರು ಜನ ಭಯೋತ್ಪಾದಕರು ರಾಜ್ಯದಲ್ಲಿ ಇದ್ದಾರೆ. ಎಚ್ಚರಿಕೆಯಿಂದಿರ ಎಂಬ ಸಂದೇಶವನ್ನು ಈಗಾಗಲೇ ಗುಪ್ತಚರ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇದಲ್ಲದೆ ಕಳೆದ ವಾರ ಪಠಾನ್‌ಕೋಟ್‌ನಲ್ಲಿ ಬಂದೂಕು ತೋರಿಸಿ ನಾಲ್ವರು ಎಸ್‌ಯುವಿ ವಾಹನವೊಂದನ್ನು ಅಪಹರಿಸಿದ್ದು ವರದಿಯಾಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರವಹಿಸಲಾಗಿದೆ.