ರಾಜೇ V/S ಸಿಂಗ್‌: ರಾಜಸ್ಥಾನದಲ್ಲಿ ಅನಿರೀಕ್ಷಿತ ದಾಳ ಉರುಳಿಸಿದ ಕಾಂಗ್ರೆಸ್‌
ಸುದ್ದಿ ಸಾರ

ರಾಜೇ V/S ಸಿಂಗ್‌: ರಾಜಸ್ಥಾನದಲ್ಲಿ ಅನಿರೀಕ್ಷಿತ ದಾಳ ಉರುಳಿಸಿದ ಕಾಂಗ್ರೆಸ್‌

ಸಾಮಾನ್ಯವಾಗಿ ಪ್ರಬಲ ನಾಯಕರಿಗೆ ಸ್ವ ಕ್ಷೇತ್ರದಲ್ಲೇ ತುರುಸಿನ ಸ್ಪರ್ಧೆ ನೀಡಿದರೆ ಅವರಿಗೆ ಉಳಿದ ಕ್ಷೇತ್ರಗಳ ಕಡೆ ಗಮನ ಹರಿಸುವುದು ಕಷ್ಟವಾಗುತ್ತದೆ. ಅದೇ ತಂತ್ರವನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅನುಸರಿಸುತ್ತಿದೆ.

ಮಧ್ಯ ಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಪ್ರಬಲ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಅರುಣ್‌ ಯಾದವ್‌ರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌ ರಾಜಸ್ಥಾನದಲ್ಲಿಯೂ ಇದೇ ತಂತ್ರ ಅನುಸರಿಸಲು ಮುಂದಾಗಿದೆ. ಇಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಿಜೆಪಿ ಹಿರಿಯ ನಾಯಕ ಜಸ್ವಂತ್‌ ಸಿಂಗ್‌ ಪುತ್ರನನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಕಳೆದ ತಿಂಗಳು ಬಿಜೆಪಿ ಸೇರಿರುವ ಸಿಂಗ್‌ ಪುತ್ರ ಮನ್ವೇಂದ್ರ ಸಿಂಗ್‌ಗೆ ಜಲ್ರಪಟ್ಟಣದಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿ ಸ್ಪರ್ಧೆಗಿಳಿಸಿದೆ. ಇಂದು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ 32 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು ಅದರಲ್ಲಿ ಸಿಂಗ್‌ ಹೆಸರೂ ಕೂಡ ಇದೆ. ಈ ಮೂಲಕ ಜನಪ್ರಿಯ ನಾಯಕಿ ರಾಜೇಯನ್ನು ಸ್ವಂತ ಕ್ಷೇತ್ರದಲ್ಲೇ ಕಟ್ಟಿ ಹಾಕಲು ಕಾಂಗ್ರೆಸ್‌ ತಂತ್ರ ಹೆಣೆದಿದೆ.

ಸಾಮಾನ್ಯವಾಗಿ ಪ್ರಬಲ ನಾಯಕರಿಗೆ ಸ್ವ ಕ್ಷೇತ್ರದಲ್ಲೇ ಸ್ಪರ್ಧೆ ನೀಡಿದರೆ ಅವರಿಗೆ ಉಳಿದ ಕ್ಷೇತ್ರಗಳ ಕಡೆ ಗಮನ ಹರಿಸುವುದು ಕಷ್ಟವಾಗುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಸಿದ್ಧರಾಮಯ್ಯನವರ ವಿರುದ್ಧ ಬಿಜೆಪಿ ಇದೇ ತಂತ್ರ ಅನುಸರಿಸಿತ್ತು. ಇದೀಗ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಇದೇ ಮಾದರಿಯನ್ನು ಬಿಜೆಪಿ ವಿರುದ್ಧ ಪ್ರಯೋಗಿಸುತ್ತಿದೆ.

54 ವರ್ಷದ ಮನ್ವೇಂದ್ರ ಸಿಂಗ್‌ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬರ್ಮೆರ್‌ ಶಿಯೋ ಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಇದೀಗ ಹೊಸ ಸವಾಲನ್ನು ಅವರು ಸ್ವೀಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ನನಗೆ ಗೌರವ ಸಿಕ್ಕಿದೆ. ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಚುನಾವಣಾ ಸಮಿತಿಯವರು ನಾನು ರಾಜೇ ವಿರುದ್ಧ ಸ್ಪರ್ಧಿಸುವುದು ಸೂಕ್ತ ಎಂಬ ತೀರ್ಮಾನ ತೆಗೆದುಕೊಂಡಿದ್ದಾರೆ. ನನಗೆ ನೀಡುತ್ತಿರುವ ಜವಾಬ್ದಾರಿ ನನ್ನ ಮನ ಮುಟ್ಟಿದೆ. ನಾನು ಈ ಜವಾಬ್ದಾರಿಯನ್ನು ಒಪ್ಪಿಕೊಂಡು ಸೂಕ್ತವಾದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ,” ಎಂದವರು ತಿಳಿಸಿದ್ದಾರೆ.

ಅಂದ ಹಾಗೆ ರಾಜಸ್ಥಾನದಲ್ಲಿ ಡಿಸೆಂಬರ್‌ 7ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 11ರಂದು ಮತ ಎಣಿಕೆ ನಡೆಯಲಿದೆ.