‘ಗಾಜಾ’ ಚಂಡಮಾರುತದ ಅಬ್ಬರಕ್ಕೆ 20 ಬಲಿ, ತತ್ತರಿಸಿದ ತಮಿಳುನಾಡು
ಸುದ್ದಿ ಸಾರ

‘ಗಾಜಾ’ ಚಂಡಮಾರುತದ ಅಬ್ಬರಕ್ಕೆ 20 ಬಲಿ, ತತ್ತರಿಸಿದ ತಮಿಳುನಾಡು

ಸಂತಸದ ಸುದ್ದಿಯೆಂದರೆ ಮುಂದಿನ ಮೂರು ಗಂಟೆಗಳಲ್ಲಿ ಗಾಜಾ ಚಂಡಮಾರುತ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗಾಜಾ ಚಂಡಮಾರುತ ಶುಕ್ರವಾರ ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ್ದು ಹಲವು ಜನರನ್ನು ಬಲಿ ಪಡೆದಿದೆ. ಅಧಿಕೃತ ಮಾಹಿತಿಗಳ ಪ್ರಕಾರ ಇಲ್ಲಿಯವರೆಗೆ 11 ಜನರು ಸಾವನ್ನಪ್ಪಿದ್ದಾರೆ. ‘ದಿ ಹಿಂದೂ’ ಮಾತ್ರ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

ನಿರೀಕ್ಷೆಯಂತೆ ಗುರುವಾರ ರಾತ್ರಿ ತಮಿಳುನಾಡಿಗೆ ಸೈಕ್ಲೋನ್‌ ಗಾಜಾ ಅಪ್ಪಳಿಸಬೇಕಾಗಿತ್ತು. ಆದರೆ ಸ್ವಲ್ಪ ತಡವಾಗಿ ನಾಗಪಟ್ಟಣಂ ಮತ್ತು ವೇದರಣ್ಯಂ ಮಧ್ಯೆ ಶುಕ್ರವಾರ ಮುಂಜಾನೆ ಚಂಡಮಾರುತ ಬಂದು ಅಪ್ಪಳಿಸಿದೆ.

65-75 ಕಿಲೋಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಗಾಳಿಗೆ ಅಲ್ಲಲ್ಲಿ ಮರಗಳು ಮನೆ, ರಸ್ತೆಗಳ ಮೇಲೆಲ್ಲಾ ಉರುಳಿ ಬಿದ್ದಿವೆ. ಜತೆಗೆ ತಮಿಳುನಾಡಿನ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ಆಸ್ತಿ ಮತ್ತು ಜೀವ ಹಾನಿಗೆ ಕಾರಣವಾಗಿದೆ.

ಸೈಕ್ಲೋನ್‌ನಿಂದಾಗಿ ತಂಜಾವೂರ್‌ ಜಿಲ್ಲೆಯಲ್ಲಿ 10 ಜನರು, ತಿರುವೂರ್‌ನಲ್ಲಿ 4 ಜನರು, ಪುದುಕೊಟ್ಟೈನಲ್ಲಿ ಮೂವರು, ತಿರುಚಿಯಲ್ಲಿ ಇಬ್ಬರು ಮತ್ತು ನಾಗಪಟ್ಟಣಂನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ‘ದಿ ಹಿಂದೂ’ ಹೇಳಿದೆ. ಇಬ್ಬರು ಗಾಯಗೊಂಡಿದ್ದು, 80 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಸತ್ತವರಲ್ಲಿ ಹೆಚ್ಚಿನವರು ಗೋಡೆ ಕುಸಿದು, ಮನೆಯ ಮೇಲೆ ಮರ ಬಿದ್ದು ಮತ್ತು ವಿದ್ಯುತ್‌ ತಗುಲಿ ಮರಣ ಹೊಂದಿದ್ದಾರೆ..

ಚಂಡಮಾರುತಕ್ಕೆ ಕಾರೈಕಲ್‌ ಕರಾವಳಿಯಲ್ಲಿ ಹಲವು ಮನೆಗಳನ್ನು ನಾಮವಶೇಷಗೊಂಡಿದ್ದು, ಮರಗಳು ಉರುಳಿ ಬಿದ್ದು ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕೊಡೈಕೆನಾಲ್‌ ಮತ್ತು ಪಳನಿ ಘಾಟಿ ರಸ್ತೆಗಳಲ್ಲಿ ಮಳೆಯಿಂದ ಭೂಕುಸಿತ ಸಂಭವಿಸಿದ್ದೂ ವರದಿಯಾಗಿದೆ.

ಸಂತಸದ ಸುದ್ದಿಯೆಂದರೆ ಮುಂದಿನ ಮೂರು ಗಂಟೆಗಳಲ್ಲಿ ಗಾಜಾ ಚಂಡಮಾರುತ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ ತಮಿಳುನಾಡಿನ ಒಳನಾಡು ಭಾಗದಲ್ಲಿ ಮತ್ತು ಕೇರಳ ಹಾಗೂ ಲಕ್ಷದ್ವೀಪದ ಒಳನಾಡು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಚಂಡಮಾರುತ ಮತ್ತು ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಹೆಲ್ಪ್‌ಲೈನ್‌ಗಳನ್ನು ಆರಂಭಿಸಿದ್ದು ಸಾವಿಗೀಡಾದವರ ಕುಟಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸೇಲಂನಲ್ಲಿ ತಿಳಿಸಿದ್ದಾರೆ. ವಿಕೋಪ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್‌.ಬಿ. ಉದಯ್‌ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಂಡಮಾರುತ ಮತ್ತು ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲನೆ ಮಾಡಬೇಕಾಗಿದ್ದು ವಿವರವಾದ ವರದಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಳೆ ಮತ್ತು ಬಿರುಗಾಳಿಯ ಹಿನ್ನೆಲೆಯಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದರೆ, ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಮತ್ತು ದಕ್ಷಿಣ ಜಿಲ್ಲೆಗಳಾದ ಮಧುರೈ, ಥೇಣಿ, ವಿರುದುನಗರ, ತಿರುಚಿ, ತೂತುಕುಡಿ, ಕೊಯಮತ್ತೂರು, ನಾಗಪಟ್ಟನಂ, ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಚಿತ್ರ ಕೃಪೆ: ದಿ ಹಿಂದೂ