samachara
www.samachara.com
ರಫೇಲ್‌ ಡೀಲ್‌ ಬಗ್ಗೆ ಸಿಬಿಐ ತನಿಖೆ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌
ಸುದ್ದಿ ಸಾರ

ರಫೇಲ್‌ ಡೀಲ್‌ ಬಗ್ಗೆ ಸಿಬಿಐ ತನಿಖೆ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ರಫೇಲ್‌ ಡೀಲ್‌ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ಮಹತ್ವ ಪಡೆದುಕೊಂಡಿದೆ.

Team Samachara

ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ. ‘ಸಾವಿರಾರು ಕೋಟಿ ರೂಪಾಯಿ ವೆಚ್ಚದ 36 ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ. ಈ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್‌ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಯಬೇಕು,’ ಎಂದು ಕೋರಿ ಹಲವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ಸರಕಾರ ರಫೇಲ್‌ ಡೀಲ್‌ ನಡೆದ ಪ್ರಕ್ರಿಯೆಗಳನ್ನು ಮತ್ತು ಮುಚ್ಚಿದ ಲಕೋಟೆಯಲ್ಲಿ ಯುದ್ಧ ವಿಮಾನದ ಬೆಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ರಫೇಲ್‌ ಡೀಲ್‌ ನಡೆದ ಪ್ರಕ್ರಿಯೆಯನ್ನು ಅರ್ಜಿದಾರರಾದ ವಕೀಲ ಮನೋಹರ್‌ ಲಾಲ್‌ ಶರ್ಮಾ, ವಕೀಲ ವೀನ್‌ ಧಂಡ, ಎಎಪಿ ಸಂಸದ ಸಂಜಯ್‌ ಸಿಂಗ್, ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ನೀಡಿತ್ತು.

ಇಂದು ನಡೆದ ವಿಚಾರಣೆ ವೇಳೆ, ಯುದ್ಧ ವಿಮಾನ ನಿರ್ಮಾಣದಲ್ಲಿ ಯಾವುದೇ ಅನುಭವವಿಲ್ಲದ ರಿಲಯನ್ಸ್‌ ಕಂಪನಿಯನ್ನು ಡಸಾಲ್ಟ್‌ ಆಫ್‌ಸೆಟ್‌ ಪಾರ್ಟ್ನರ್‌ ಆಗಿ ಆಯ್ಕೆ ಮಾಡಿಕೊಂಡ ತೀರ್ಮಾನವನ್ನು ಪ್ರಶಾಂತ್‌ ಭೂಷಣ್‌ ಪ್ರಶ್ನಿಸಿದರು. ರಿಲಯನ್ಸ್‌ ಆಯ್ಕೆಯು ಒಪ್ಪಂದದ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ವಾದಿಸಿದ ಭೂಷಣ್‌, ಈ ತೀರ್ಮಾನವನ್ನು ಸಂಪುಟಕ್ಕೆ, ರಕ್ಷಣಾ ಖರೀದಿ ಸಮಿತಿ ಅಥವಾ ರಕ್ಷಣಾ ಸಚಿವರು ಯಾರೊಬ್ಬರ ಗಮನಕ್ಕೂ ತಂದಿರಲಿಲ್ಲ ಎಂದರು. ತನಗೆ ಬೇಕಾದವರಿಗೆ ಟೆಂಡರ್‌ ನೀಡಬೇಕು ಎಂಬ ಕಾರಣಕ್ಕೆ ಅಂತರ್‌ ಸರಕಾರ ಒಪ್ಪಂದದ ಪ್ರಕ್ರಿಯೆಯನ್ನು ಕೈಬಿಟ್ಟು ಸರಕಾರ ಅಡ್ಡ ದಾರಿಯಲ್ಲಿ ಖರೀದಿ ವ್ಯವಹಾರ ನಡೆಸಿದೆ ಎಂದು ದೂರಿದರು.

ಅಲ್ಲದೆ ಸರಕಾರ ಗೌಪ್ಯ ಷರತ್ತನ್ನು ಮುಂದಿಟ್ಟು ರಫೇಲ್‌ ವಿಮಾನದ ಬೆಲೆಯನ್ನು ಬಹಿರಂಗಪಡಿಸದೆ ಮುಚ್ಚಿಡುತ್ತಿದೆ ಎಂದು ಶೌರಿ, ಸಿನ್ಹಾ ಮತ್ತು ತಮ್ಮ ಪರವಾಗಿ ಕೋರ್ಟ್‌ಗೆ ಹಾಜರಾದ ಭೂಷಣ್‌ ವಾದಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌, ‘ಗೌಪ್ಯತೆಯ ಒಪ್ಪಂದ ಗೌಪ್ಯಾವಾಗೇ ಇರಬೇಕು’ ಎಂದು ವಾದಿಸಿದರು. ಒಂದೊಮ್ಮೆ ಬೆಲೆಯನ್ನು ಬಹಿರಂಗಪಡಿಸಿದರೆ ಎದುರಾಳಿಗಳಿಗೆ ಇದರಲ್ಲಿರುವ ಶಸ್ತ್ರಾಸ್ತ್ರಗಳು ತಿಳಿಯುತ್ತವೆ ಎಂದು ಸಮಜಾಯಿಷಿ ನೀಡಿದರು.

ನಂತರ ಡೀಲ್‌ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಏರ್ ವೈಸ್‌ ಮಾರ್ಷಲ್‌ ಜೆ. ಚಲಪತಿ ಅವರನ್ನು ಕರೆಸಿಕೊಂಡ ಸುಪ್ರೀಂ ಕೋರ್ಟ್‌, ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿತು.

ಇನ್ನು ಸೋಮವಾರ ನ್ಯಾಯಾಲಯಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಸರಕಾರ, ‘ಯುಪಿಎ ಕಾಲದಲ್ಲಿ ಡೀಲ್‌ ಪ್ರಕ್ರಿಯೆಯಲ್ಲಿ ತಡ ಮಾಡಿದ್ದರಿಂದ ಎದುರಾಳಿಗಳಿಗೆ ತಮ್ಮ ಯುದ್ಧವಿಮಾನಗಳನ್ನು ಅಭಿವೃದ್ಧಿಗೊಳಿಸಲು ಮತ್ತು ಹೆಚ್ಚಿನ ಸಲಕರಣೆಗಳನ್ನು ಜೋಡಿಸಲು ಸಮಯ ನೀಡಿದಂತಾಗಿತ್ತು’ ಎಂದು ಹೇಳಿತ್ತು. ಈ ಮೂಲಕ ತನ್ನ ಆಯ್ಕೆ ಸರಿ ಇದೆ ಎಂದು ವಾದಿಸಿತ್ತು.

ಇಂದು ನಡೆದ ವಿಚಾರಣೆಯಲ್ಲಿ, ಒಂದೊಮ್ಮೆ ಪಾಲುದಾರರು ಉತ್ಪಾದನೆ ಮಾಡದಿದ್ದಲ್ಲಿ ದೇಶದ ಹಿತಾಸಕ್ತಿಯನ್ನು ಹೇಗೆ ಕಾಪಾಡುತ್ತೀರಿ ಎಂದು ನ್ಯಾಯಮೂರ್ತಿ ಕೆ. ಎಂ. ಜೋಸೆಫ್‌ ಪ್ರಶ್ನಿಸಿದರು. ಆಗ ಮೂಲ ಉತ್ಪಾದಕರು ನೀಡಿದ ತಮ್ಮ ಪಾಲುದಾರರನ್ನು ಸರಕಾರ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವೋಣುಗೋಪಾಲ್‌ ಹೇಳಿದರು. ಮತ್ತು ಡಸಾಲ್ಟ್‌ ಇಲ್ಲಿಯವರೆಗೆ ಪಾಲುದಾರರ ವಿವರಗಳನ್ನು ಸರಕಾರಕ್ಕೆ ಸಲ್ಲಿಸಿಲ್ಲ ಎಂದು ವಿವರಿಸಿದರು.

ತಮ್ಮ ಸರಕಾರದ ತೀರ್ಮಾನವನ್ನು ಸಮರ್ಥಿಸುವ ಭರಾಟೆಯಲ್ಲಿ ವೇಣುಗೋಪಾಲ್‌, ಒಂದೊಮ್ಮೆ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ರಫೇಲ್‌ ಇದ್ದಿದ್ದರೆ ಇಷ್ಟೆಲ್ಲಾ ಪ್ರಾಣ ಹಾನಿ ಸಂಭವಿಸುತ್ತಿರಲಿಲ್ಲ ಎಂದರು. ಆಗ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ರಫೇಲ್‌ ನಿರ್ಮಾಣವಾಗಿದ್ದೇ 2014ರಲ್ಲಿ ಎಂದು ಛೇಡಿಸಿದರು. ಇದಕ್ಕೆ, ‘ನಾನು ಕಲ್ಪನಾತ್ಮಕವಾಗಿ ಹೀಗೆ ಹೇಳಿದೆ’ ಎಂದು ವೇಣುಗೋಪಾಲ್‌ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಪ್ರತಿಕ್ರಿಯೆ ನೀಡಿದರು.

ಒಟ್ಟಾರೆ ರಫೇಲ್‌ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾ, ಗೊಗೋಯಿ, ಉದಯ್‌ ಲಲಿತ್‌ ಮತ್ತು ಕೆ.ಎಂ. ಜೋಸೆಫ್‌ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿದೆ. ರಫೇಲ್‌ ಡೀಲ್‌ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದ್ದು ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ಮಹತ್ವ ಪಡೆದುಕೊಂಡಿದೆ.