ಶ್ರೀಲಂಕಾ ಬಿಕ್ಕಟ್ಟು: ಎರಡು ವಾರದಲ್ಲೇ ಬಿದ್ದ ರಾಜಪಕ್ಸೆ ಸರ್ಕಾರ; ಮುಂದೇನು?
ಸುದ್ದಿ ಸಾರ

ಶ್ರೀಲಂಕಾ ಬಿಕ್ಕಟ್ಟು: ಎರಡು ವಾರದಲ್ಲೇ ಬಿದ್ದ ರಾಜಪಕ್ಸೆ ಸರ್ಕಾರ; ಮುಂದೇನು?

ಶ್ರೀಲಂಕಾದ ಒಂದು ಬಿಕ್ಕಟ್ಟು ಶಮನಗೊಂಡಿದೆ. ಆದರೆ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ ಬಂದಿರುವ ಅಧ್ಯಕ್ಷ ಸಿರಿಸೇನಾ ಈಗ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಇಂದು ನಡೆದ ಅಧಿವೇಶನದಲ್ಲಿ ನೂತನವಾಗಿ ಅಧಿಕಾರವಹಿಸಿಕೊಂಡಿದ್ದ ಪ್ರಧಾನಿ ಮಹಿಂದಾ ರಾಜಪಕ್ಸೆ ಸರಕಾರಕ್ಕೆ ಹಿನ್ನೆಡೆಯಾಗಿದೆ. ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಅನುಮೋದನೆಗೊಂಡಿದ್ದು ಎರಡೇ ವಾರದಲ್ಲೇ ಮಹಿಂದಾ ರಾಜಪಕ್ಸೆ ಸರಕಾರ ಬಿದ್ದು ಹೋಗಿದೆ.

ಈ ಹಿಂದೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆಯವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆಯವರನ್ನು ಏಕಪಕ್ಷೀಯವಾಗಿ ನೇಮಕಗೊಳಿಸಿದ್ದರು. ಬೆನ್ನಿಗೆ ಸಂಸತ್ತನ್ನು ವಿಸರ್ಜನೆಗೊಳಿಸಿದ ಚುನಾವಣೆ ಘೋಷಿಸಿದ್ದರು. ಈ ತೀರ್ಮಾನವನ್ನು ಸುಪ್ರಿಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್‌ನ ವಿಶೇಷ ಅಧಿವೇಶನ ನಡೆಯಿತು.

“225 ಸದಸ್ಯ ಬಲದ ಸಂಸತ್‌ನ ಬಹುಸಂಖ್ಯಾತ ಸದಸ್ಯರು ರಾಜಪಕ್ಸೆ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದಾರೆ,” ಎಂದು ಸ್ಪೀಕರ್‌ ಕರು ಜಯಸೂರ್ಯ ಘೋಷಣೆ ಮಾಡಿದ್ದಾರೆ. ಇದರಿಂದ ಎರಡೇ ವಾರಗಳಲ್ಲಿ ರಾಜಪಕ್ಸೆ ಸರಕಾರ ಬಿದ್ದು ಹೋಗಿದೆ.

ವಜಾಗೊಂಡ ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ
ವಜಾಗೊಂಡ ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ
/ಗ್ರೌಂಡ್‌ವ್ಯೂಸ್

ಕಾವೇರಿದ ವಾತಾವರಣ

ಇಂದು ರಾಜಪಕ್ಸೆ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವ ಹಿನ್ನೆಲೆಯಲ್ಲಿ ದೇಶದ ಸಂಸತ್‌ ಮತ್ತು ಹೊರಗೆ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಇದರ ಮಧ್ಯದಲ್ಲೇ ಕರು ಜಯಸೂರ್ಯ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು.

ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಕೆಲವೇ ಕ್ಷಣಗಳಿರುವಾಗ ವಿವಾದಿತ ಮಾಜಿ ಅಧ್ಯಕ್ಷ , ಹಾಲಿ ಪ್ರಧಾನಿ ರಾಜಪಕ್ಸೆ ತಮ್ಮ ಪುತ್ರ ನಮಲ್‌ ಜತೆ ಸಭಾತ್ಯಾಗ ನಡೆಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ಅಧಿಕಾರ ದಂಡವನ್ನು ರಾಜಪಕ್ಸೆ ಬೆಂಬಲಿಗರು ಕಸಿದುಕೊಳ್ಳುವ ಯತ್ನವನ್ನೂ ನಡೆಸಿದರು. ಆದರೆ ಇದಕ್ಕೆ ಜಗ್ಗದ ಸ್ಪೀಕರ್‌ ಜಯಸೂರ್ಯ ನಿರ್ಣಯವನ್ನು ಮತಕ್ಕೆ ಹಾಕಿದರು.

ಈ ಕುರಿತು ರಾಯ್ಟರ್ಸ್‌ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್‌. ಸಂಬಂಥನ್‌, “ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಧ್ವನಿಮತಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಬಹುಸಂಖ್ಯಾತರು ಇದನ್ನು ಬೆಂಬಲಿಸಿದರು,” ಎಂದು ಹೇಳಿದ್ದಾರೆ.

ಆದರೆ ಈ ನಿರ್ಣಯದಿಂದ ವಿಕ್ರಮಸಿಂಘೆಯವರ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಸಂಸತ್‌ನಲ್ಲಿ ಬಹುಮತ ಹೊಂದಿದೆ ಎಂಬುದು ಋಜುವಾತಾಗಿಲ್ಲ. ಆದರೆ ಸಾಂವಿಧಾನಿಕ ನೆಲೆಯಲ್ಲಿ ತನ್ನ ಶಕ್ತಿ ಪ್ರದರ್ಶನ ನಡೆಸಿನೂತನ ಸರಕಾರವನ್ನು ಕಿತ್ತೊಗೆದಿದೆ.

ಸದ್ಯ ಒಂದು ಬಿಕ್ಕಟ್ಟು ಶಮನಗೊಂಡಿದೆ. ಆದರೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ ಬಂದಿರುವ ಸಿರಿಸೇನಾ ಈಗ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.