ಯಾರ ಅಂಕೆಗೂ ಸಿಗದ ಬೆಂಕಿ, ಕ್ಯಾಲಿಫೋರ್ನಿಯಾದ ಭೀಕರ ಕಾಡ್ಗಿಚ್ಚಿಗೆ 31 ಬಲಿ
ಸುದ್ದಿ ಸಾರ

ಯಾರ ಅಂಕೆಗೂ ಸಿಗದ ಬೆಂಕಿ, ಕ್ಯಾಲಿಫೋರ್ನಿಯಾದ ಭೀಕರ ಕಾಡ್ಗಿಚ್ಚಿಗೆ 31 ಬಲಿ

ಕಾಡ್ಗಿಚ್ಚಿನಿಂದ ಭಾನುವಾರದ ಹೊತ್ತಿಗೆ 25 ಜನ ಅಸುನೀಗಿದ್ದರು. ಸೋಮವಾರ ಮನೆಯಲ್ಲಿ ಸುಟ್ಟು ಕರಕಲಾದ ಐವರ ಮೃತ ದೇಹಗಳು ಪತ್ತೆಯಾಗಿವೆ. ಜತೆಗೆ 6ನೇ ವ್ಯಕ್ತಿಯ ಮೃತ ದೇಹ ವಾಹನವೊಂದರಲ್ಲಿ ಪತ್ತೆಯಾಗಿದ್ದು, ಸತ್ತವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಹುಟ್ಟಿಕೊಂಡಿರುವ ಇತಿಹಾಸದ ಭೀಕರ ಕಾಡ್ಗಿಚ್ಚಿಗೆ ಬರೋಬ್ಬರಿ 31 ಜನರು ಬಲಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇಟ್ಟುಕೊಂಡು ರಕ್ಷಣಾ ಕಾರ್ಯಾಚರಣೆ, ಬೆಂಕಿ ನಂದಿಸುವ ಕೆಲಸಕ್ಕೆ ಕೈ ಹಾಕಿದ್ದರೂ ಕಾಡ್ಗಿಚ್ಚು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಈ ಕಾಡ್ಗಿಚ್ಚಿನಲ್ಲಿ ಭಾನುವಾರದ ಹೊತ್ತಿಗೆ 25 ಜನರು ಅಸುನೀಗಿದ್ದರು. ಸೋಮವಾರ ಮನೆಯಲ್ಲಿ ಸುಟ್ಟು ಕರಕಲಾದ ಐವರ ಮೃತ ದೇಹಗಳು ಪತ್ತೆಯಾಗಿವೆ. ಇದರ ಜತೆಗೆ ಆರನೇ ವ್ಯಕ್ತಿಯ ಮೃತ ದೇಹ ವಾಹನವೊಂದರಲ್ಲಿ ಪತ್ತೆಯಾಗಿದ್ದು ಒಟ್ಟು ಸತ್ತವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಇನ್ನೂ 200 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು ಇವರು ಏನಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಹಲವು ಮನೆಗಳನ್ನು, ಜನ ವಸತಿ ಪ್ರದೇಶಗಳನ್ನು ಕಾಡ್ಗಿಚ್ಚು ಆವರಿಸಿಕೊಂಡಿದ್ದು ಇಲ್ಲಿ ಯಾರಾದರೂ ಬದುಕಿದ್ದಾರೆಯೇ, ಸತ್ತಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರ ಬಳಿ ಖಚಿತ ಮಾಹಿತಿಗಳಿಲ್ಲ.

ಯಾರ ಅಂಕೆಗೂ ಸಿಗದ ಬೆಂಕಿ, ಕ್ಯಾಲಿಫೋರ್ನಿಯಾದ ಭೀಕರ ಕಾಡ್ಗಿಚ್ಚಿಗೆ 31 ಬಲಿ

ಆಗಿದ್ದೇನು?

ಉತ್ತರ ಕ್ಯಾಲಿಫೋರ್ನಿಯಾ ಭಾಗದಲ್ಲಿ ಹಾಕಿದ ಕ್ಯಾಂಪ್‌ ಫೈರ್‌ನಿಂದ ಕಾಡ್ಗಿಚ್ಚು ಹತ್ತಿಕೊಂಡಿತು ಎಂದು ಅಂದಾಜಿಸಲಾಗಿದೆ. ಮೊದಲ ಬಾರಿಗೆ ಇಲ್ಲಿನ ಅರಣ್ಯದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಲೇ ಇದು ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ನೂರಾರು ಕಿಲೋಮೀಟರ್‌ ಅರಣ್ಯ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಪರಿಣಾಮ ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಕಾಡ್ಗಿಚ್ಚು ಹಬ್ಬುತ್ತಲೇ ಇದ್ದು ಮಲಿಬು ಬೀಚ್‌ ಸಮೀಪ ಮನೆ ಕಟ್ಟಿಕೊಂಡಿದ್ದ ಶ್ರೀಮಂತ ಸಮುದಾಯ ಪೂರ್ತಿ ನೆಲಕಚ್ಚಿದೆ. ಲಾಸ್‌ ಏಂಜಲೀಸ್‌ನಲ್ಲಿ ಬರುವ ಈ ಪ್ರದೇಶದಲ್ಲಿ ಹಾಲಿವುಡ್‌ ಸ್ಟಾರ್‌ಗಳ ಐಷಾರಾಮಿ ಮನೆಗಳಿದ್ದವು. ಅವೆಲ್ಲಾ ಈಗ ಬೆಂಕಿಗೆ ಆಹುತಿಯಾಗಿವೆ. ಈ ಶ್ರೀಮಂತರ ಮನೆಗಳಲ್ಲಿ ದರೋಡೆಗಳೂ ನಡೆಯುತ್ತಿರುವುದು ವರದಿಯಾಗಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ಕಾಡ್ಗಿಚ್ಚು ಹರಡಿದ ಪ್ರದೇಶದಲ್ಲಿ ಒಣ ಮತ್ತು ಬಿಸಿ ಗಾಳಿ ಮೇಲಿಂದ ಮೇಲೆ ಬೀಸುತ್ತಿದ್ದು ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಕಾಡು, ಮನೆಗಳನ್ನುಆಹುತಿ ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡು ಪ್ರದೇಶದ ಸಮೀಪದಲ್ಲಿರುವವರು ಮನೆಗಳನ್ನು ಬಿಟ್ಟು ತೆರಳುವಂತೆ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.

ಇಲ್ಲಿಯವರೆಗೆ ಕಾಡ್ಗಿಚ್ಚು 6,700 ಮನೆಗಳು ಮತ್ತು ಉದ್ಯಮ ಘಟಕಗಳನ್ನು ನಾಶ ಮಾಡಿದೆ. ಈ ಹಿಂದೆ ಸಂಭವಿಸಿದ ಕ್ಯಾಲಿಫೋರ್ನಿಯಾದ ಯಾವುದೇ ಕಾಡ್ಗಿಚ್ಚು ಇಷ್ಟು ದೊಡ್ಡ ಪ್ರಮಾಣದ ನಾಶ ಉಂಟು ಮಾಡಿರಲಿಲ್ಲ. ಜತೆಗೆ ಅತಂತ್ಯ ಹೆಚ್ಚಿನ ಸಂಖ್ಯೆಯ ಜನರು ಈ ಬಾರಿ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.