samachara
www.samachara.com
ಜನಾರ್ದನ ರೆಡ್ಡಿಗೆ ಸಿಗದ ನಿರೀಕ್ಷಣಾ ಜಾಮೀನು; ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ
ಸುದ್ದಿ ಸಾರ

ಜನಾರ್ದನ ರೆಡ್ಡಿಗೆ ಸಿಗದ ನಿರೀಕ್ಷಣಾ ಜಾಮೀನು; ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ನಿರೀಕ್ಷಣಾ ಜಾಮೀನು ಸಿಗುವವರೆಗೂ ಗಾಲಿ ಜನಾರ್ದನ ರೆಡ್ಡಿಗೆ ಬಂಧನದ ಭೀತಿ ತಪ್ಪಿದ್ದಲ್ಲ.

ಮಾಜಿ ಸಚಿವ ಜನಾರ್ದನ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 61ನೇ ಸಿಟಿ ಸಿವಿಲ್ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ರೆಡ್ಡಿಗೆ ಬಂಧನದ ಭೀತಿ ಮುಂದುವರಿದಿದೆ. ಆಂಬಿಡೆಂಟ್‌ ಕಂಪೆನಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಡೀಲ್‌ ನಡೆಸಿದ ಆರೋಪ ಜನಾರ್ದನ ರೆಡ್ಡಿ ಮೇಲಿದೆ.

ರೆಡ್ಡಿ ಪರ ವಕೀಲರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರಿಗೆ ಸೂಚಿಸಲಾಗಿದೆ. ಈ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ಮತ್ತೆ

ಈ ನಡುವೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಜನಾರ್ದನ ರೆಡ್ಡಿಗೆ ನೋಟಿಸ್‌ ಜಾರಿ ಮಾಡಿದೆ. ಭಾನುವಾರ ವಿಚಾರಣೆಗೆ ಹಾಜರಾಗುವ ಬಗ್ಗೆ ಶನಿವಾರ ನಿರ್ಧರಿಸುತ್ತೇವೆ ಎಂದು ರೆಡ್ಡಿ ಪರ ವಕೀಲ ಸಿ.ಎಚ್‌. ಹನುಮಂತರಾಯ ಹೇಳಿದ್ದಾರೆ.

Also read: 57 ಕೆ.ಜಿ. ಚಿನ್ನದ ಗಟ್ಟಿಯ ‘ರೋಚಕ ಕಥೆ’; ಗಾಲಿ ರೆಡ್ಡಿ ಸಂಜೆ ಹೊತ್ತಿಗೆ ಪೊಲೀಸರಿಗೆ ಶರಣು?

“ಈ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಬದಲಿಸುವಂತೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ ಮುಂದಿನ ವಾರ ವಿಚಾರಣೆ ನಡೆಸಲಿದೆ. ತನಿಖಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಇದೆ. ಚುನಾವಣೆ ಸಂದರ್ಭದಲ್ಲಿ ರೆಡ್ಡಿ ಅವರನ್ನು ಬಂಧಿಸಬೇಕೇ ಎಂಬ ಬಗ್ಗೆ ತನಿಖಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುಮತಿ ಕೇಳಿದ್ದಾರೆ. ಆದರೆ, ಕರ್ತವ್ಯ ಪಾಲನೆ ವಿಚಾರದಲ್ಲಿ ಸ್ವತಂತ್ರರಾಗಿರುವ ಅಧಿಕಾರಿಗಳು ಹೀಗೆ ಅನುಮತಿ ಕೇಳುವ ಅಗತ್ಯವಿಲ್ಲ. ಅಧಿಕಾರಿಗಳ ಈ ನಡೆಯೇ ತನಿಖೆಯ ಮೇಲೆ ರಾಜಕೀಯ ಒತ್ತಡ ಇರುವುದನ್ನು ತೋರುತ್ತಿದೆ” ಎಂದು ಅವರು ತಿಳಿಸಿದ್ದಾರೆ.

“ಬಳ್ಳಾರಿಯ ರಾಜಮಹಲ್‌ ಜುವೆಲ್ಸ್‌ನ ಮಾಲೀಕ ರಮೇಶ್‌ ಅವರೊಂದಿಗೆ ಪೊಲೀಸರು ವಿಚಾರಣೆ ವೇಳೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಬಂಧನದ ಭೀತಿ ಇರುವುದರಿಂದ ರೆಡ್ಡಿ ವಿಚಾರಣೆಗೆ ಬರಲು ಹಿಂಜರಿಯುತ್ತಿದ್ದಾರೆ. ಈ ಪ್ರಕರಣದಲ್ಲಿ ರೆಡ್ಡಿ ಅವರನ್ನು ಸಿಲುಕಿಸುವ ಪ್ರಯತ್ನಗಳನ್ನು ನಡೆಸಲಾಗಿದೆ” ಎಂದು ರೆಡ್ಡಿ ಪರ ವಕೀಲರು ನ್ಯಾಯಾಧೀಶರ ಎದುರು ಹೇಳಿದ್ದಾರೆ ಎನ್ನಲಾಗಿದೆ.

ರೆಡ್ಡಿ ಶುಕ್ರವಾರ ಸಂಜೆ ಪೊಲೀಸರಿಗೆ ಶರಣಾಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಭಾನುವಾರ ವಿಚಾರಣೆಗೆ ಹಾಜರಾಗುವ ವಿಚಾರವಾಗಿಯೇ ರೆಡ್ಡಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂಬುದು ಅವರ ಪರ ವಕೀಲರ ಮಾತುಗಳಿಂದ ಸ್ಪಷ್ಟವಾಗಿದೆ. ನಿರೀಕ್ಷಣಾ ಜಾಮೀನು ಸಿಗುವವರೆಗೂ ರೆಡ್ಡಿಗೆ ಬಂಧನದ ಭೀತಿ ತಪ್ಪಿದ್ದಲ್ಲ.