ಧರ್ಮಾಧಾರಿತ ಮತಯಾಚನೆ: ಶಾಸಕತ್ವ ಕಳೆದುಕೊಂಡ ಕೇರಳದ ಎಂಎಲ್‌ಎ
ಸುದ್ದಿ ಸಾರ

ಧರ್ಮಾಧಾರಿತ ಮತಯಾಚನೆ: ಶಾಸಕತ್ವ ಕಳೆದುಕೊಂಡ ಕೇರಳದ ಎಂಎಲ್‌ಎ

‘ಇಸ್ಲಾಂನಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗೆ ಮತ ಹಾಕಬೇಡಿ’ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುವ ಮೂಲಕ 2016ರ ಚುನಾವಣೆಯಲ್ಲಿ ಕೆ.ಎಂ. ಶಾಜಿ ಧರ್ಮಾಧಾರಿತ ಮತಯಾಚನೆ ಮಾಡಿದ್ದರು.

ಅಪರೂಪದ ಪ್ರಕರಣವೊಂದರಲ್ಲಿ ಧರ್ಮಾಧಾರಿತ ಮತಯಾಚನೆ ಮಾಡಿ ಕೇರಳದ ಶಾಸಕರೊಬ್ಬರು ಶಾಸಕತ್ವ ಕಳೆದುಕೊಂಡಿದ್ದಾರೆ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌)ನ ಅಝಿಕೋಡ್‌ ಶಾಸಕ ಕೆ.ಎಂ. ಶಾಜಿ ಅನರ್ಹಗೊಂಡ ಶಾಸಕರಾಗಿದ್ದಾರೆ.

2016ರ ಚುನಾವಣೆಯಲ್ಲಿ ಶಾಜಿ ಧರ್ಮವನ್ನು ಬಳಸಿಕೊಂಡು ಚುನಾವಣೆಯಲ್ಲಿ ಮತಯಾಚನೆ ಮಾಡಿ ಜಯಗಳಿಸಿದ್ದರು ಎಂದು ದೂರಿ ಎಲ್‌ಡಿಎಫ್‌ (ಎಡಪಂಥೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ)ದ ಅಭ್ಯರ್ಥಿ ಎಂ.ವಿ. ನಿಕೇಶ್‌ ಕುಮಾರ್ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ. ರಾಜನ್‌, ಕೆ.ಎಂ.ಶಾಜಿ ಶಾಸಕತ್ವ ಅನರ್ಹಗೊಳಿಸುವಂತೆ ಕೇರಳ ವಿಧಾನಸಭಾ ಸ್ಪೀಕರ್‌ಗೆ ಸೂಚಿಸಿದ್ದಾರೆ. ಜತೆಗೆ ಆರು ವರ್ಷಗಳ ಕಾಲ ಚುನಾವಣೆಗೂ ನಿಲ್ಲದಂತೆ ನಿರ್ಬಂಧ ವಿಧಿಸಿದ್ದಾರೆ.

2016ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಯುಡಿಎಫ್‌) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಜಿ 2,287 ಮತಗಳ ಅಂತರದಿಂದ ನಿಕೇಶ್‌ ಕುಮಾರ್‌ರನ್ನು ಸೋಲಿಸಿದ್ದರು. ಆದರೆ ಈ ಗೆಲುವಿನ ಹಿಂದೆ ಧರ್ಮಾಧಾರಿತ ಮತಯಾಚನೆ ಕೆಲಸ ಮಾಡಿದೆ ಎಂದು ನಿಕೇಶ್‌ ದೂರಿದ್ದರು. ‘ಇಸ್ಲಾಂನಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗೆ ಮತ ಹಾಕಬೇಡಿ’ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುವ ಶಾಜಿಯ ಭಿತ್ತಿ ಪತ್ರಗಳನ್ನೂ ಅವರು ದೂರಿನ ಜತೆ ಲಗತ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಜಿ ಅವರೀಗ ಶಾಸಕತ್ವ ಕಳೆದುಕೊಂಡಿದ್ದಾರೆ.

ತಾವು ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಮೇಲ್ಮನವಿ ಸಲ್ಲಿಸುವುದಾಗಿ ಶಾಜಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ಕೋರಿ ಅವರು ಕೇರಳ ಹೈಕೋರ್ಟ್‌ಗೆ ಇದೇ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಿದ್ದು ನ್ಯಾಯಾಲಯ ಎರಡು ವಾರಗಳ ತಡೆ ನೀಡಿದೆ.