ತಮಿಳುನಾಡು ಉಪ ಚುನಾವಣೆಗೆ ತಮ್ಮ ಪಕ್ಷ ಸಿದ್ಧ ಎಂದ ಕಮಲ್ ಹಾಸನ್‌
ಸುದ್ದಿ ಸಾರ

ತಮಿಳುನಾಡು ಉಪ ಚುನಾವಣೆಗೆ ತಮ್ಮ ಪಕ್ಷ ಸಿದ್ಧ ಎಂದ ಕಮಲ್ ಹಾಸನ್‌

ಉಪ ಚುನಾವಣೆ ಘೋಷಣೆಯಾಗುವ ಮೊದಲೇ ತಮ್ಮ ಪಕ್ಷ ಚುನಾವಣೆಗೆ ಸಿದ್ಧವಿದೆ ಎಂದು ಕಮಲ್‌ ಹಾಸನ್‌ ಹೇಳಿಕೊಂಡಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಸದ್ಯ ಖಾಲಿ ಇರುವ 20 ಸ್ಥಾನಗಳ ಉಪ ಚುನಾವಣೆಗೆ ನಾವು ಸಿದ್ಧ ಎಂದು ಮಕ್ಕಳ್‌ ನೀಧಿ ಮೈಯ್ಯಂ (ಎಂಎನ್‌ಎಂ) ಪಕ್ಷದ ಅಧ್ಯಕ್ಷ, ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ತಮ್ಮ 64ನೇ ಹುಟ್ಟು ಹಬ್ಬದ ದಿನವಾದ ಬುಧವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಮಲ್‌ ಹಾಸನ್‌, “ಉಪ ಚುನಾವಣೆ ನಡೆಯಲಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಯಾವಾಗ ಚುನಾವಣೆ ಘೋಷಣೆಯಾದರೂ ಸ್ಪರ್ಧಿಸಲು ನಮ್ಮ ಪಕ್ಷ ಸಿದ್ಧವಿದೆ” ಎಂದಿದ್ದಾರೆ.

“ಜನರಿಗೆ ಕೇವಲ ಭರವಸೆಗಳನ್ನು ನೀಡುವ ಪೈಕಿ ನಾನಲ್ಲ. ನಾನು ಜನರಿಂದ ಸಲಹೆಗಳನ್ನು ಕೇಳುತ್ತಿದ್ದೇನೆ. ಮಾದರಿ ರಾಜಕೀಯ ಮಾಡುವುದು ನನ್ನ ಉದ್ದೇಶ” ಎಂದು ಕಮಲ್‌ ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಯ 18 ಮಂದಿ ಎಐಎಡಿಎಂಕೆ ಸದಸ್ಯರ ಶಾಸಕತ್ವವನ್ನು ಮದ್ರಾಸ್‌ ಹೈಕೋರ್ಟ್‌ ಕಳೆದ ತಿಂಗಳು ರದ್ದುಗೊಳಿಸಿದೆ. ಇನ್ನಿಬ್ಬರು ಶಾಸಕರ ನಿಧನದಿಂದ ಎರಡು ಸ್ಥಾನಗಳು ಖಾಲಿ ಉಳಿದಿದೆ. ಇದರಿಂದ ಈಗ ತಮಿಳುನಾಡು ವಿಧಾನಸಭೆಯ 20 ಸ್ಥಾನಗಳು ಖಾಲಿ ಉಳಿದಂತಾಗಿದೆ.

Also read: ಎಎಪಿಯ 27 ಶಾಸಕರಿಗೆ ರಾಷ್ಟ್ರಪತಿ ಅಭಯ, 18 ಎಐಎಡಿಎಂಕೆ ಶಾಸಕರಿಗೆ ಮದ್ರಾಸ್‌ ಹೈಕೋರ್ಟ್‌ ಎಳ್ಳುನೀರು

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಒಟ್ಟು 116 (ಸ್ಪೀಕರ್‌ ಸೇರಿ) ಹಾಗೂ ಡಿಎಂಕೆ ಮೈತ್ರಿ ಕೂಟದ 97 (ಡಿಎಂಕೆ 88, ಕಾಂಗ್ರೆಸ್‌ 8 ಮತ್ತು ಐಯುಎಂಎಲ್‌ 1) ಶಾಸಕರಿದ್ದಾರೆ.