ಭಾರೀ ಮುಖಭಂಗ: ಸಂಸತ್‌ ಕೆಳಮನೆಯಲ್ಲಿ ಬಹುಮತ ಕಳೆದುಕೊಂಡ ಟ್ರಂಪ್‌
ಸುದ್ದಿ ಸಾರ

ಭಾರೀ ಮುಖಭಂಗ: ಸಂಸತ್‌ ಕೆಳಮನೆಯಲ್ಲಿ ಬಹುಮತ ಕಳೆದುಕೊಂಡ ಟ್ರಂಪ್‌

435 ಸದಸ್ಯ ಬಲದ ಕೆಳಮನೆಯಲ್ಲಿ ಬಹುಮತಕ್ಕೆ 218 ಸ್ಥಾನಗಳು ಅಗತ್ಯವಾಗಿದ್ದು ವಿರೋಧ ಪಕ್ಷ  ಡೆಮಾಕ್ರಾಟಿಕ್‌ 219 ಸ್ಥಾನಗಳನ್ನು ಬಾಚಿಕೊಂಡು ಮುಂದಡಿ ಇಟ್ಟಿದೆ. ಟ್ರಂಪ್‌ ಪಕ್ಷ ಇಲ್ಲಿ 193 ಸ್ಥಾನಗಳಲ್ಲಿ ಗೆದ್ದು ಸೋಲೊಪ್ಪಿಕೊಂಡಿದೆ.

ಅಮೆರಿಕಾದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರೀ ಮುಖಭಂಗ ಅನುಭವಿಸಿದ್ದಾರೆ. ಸಂಸತ್‌ನ ಕೆಳಮನೆಯಲ್ಲಿ ಅವರ ರಿಪಬ್ಲಿಕನ್‌ ಪಾರ್ಟಿ ಬಹುಮತ ಕಳೆದುಕೊಂಡಿದ್ದು, ಟ್ರಂಪ್‌ ಮೇಲಿನ ಜನರ ವಿಶ್ವಾಸ ಕರಗಿರುವುದು ಋಜುವಾತಾಗಿದೆ. ಮೇಲ್ಮನೆಯಲ್ಲಿ ಮಾತ್ರ ಅವರ ಪಕ್ಷ ತನ್ನ ಹಿಡಿತ ಬಲಗೊಳಿಸಿದ್ದರೆ, ಹಲವು ರಾಜ್ಯಗಳ ಗವರ್ನರ್‌ ಹುದ್ದೆಗಳನ್ನು ಇದೇ ವೇಳೆ ಕಳೆದುಕೊಂಡಿದೆ.

ಮಧ್ಯಂತರ ಚುನಾವಣೆ ಹಾಗೆಂದರೇನು?

ಅಮೆರಿಕಾದಲ್ಲಿ ಅಧ್ಯಕ್ಷರ ಆಯ್ಕೆ ನಡೆದ ಎರಡು ವರ್ಷಗಳ ತರುವಾಯ ನಡೆಯುವ ಚುನಾವಣೆಯನ್ನು ಮಧ್ಯಂತರ ಚುನಾವಣೆ ಎಂದು ಕರೆಯಲಾಗುತ್ತದೆ. 4 ವರ್ಷಗಳ ಅಧ್ಯಕ್ಷರ ಅವಧಿಯ ಮಧ್ಯದಲ್ಲಿ ಈ ಚುನಾವಣೆ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಭಾರತದಂತೆ ಅಮೆರಿಕಾ ಸಂಸತ್‌ ಕೂಡಾ ಮೇಲ್ಮನೆ, ಕೆಳಮನೆ ಹೊಂದಿದೆ. ನಮ್ಮ ಲೋಕಸಭೆಗೆ ಹೋಲಿಸಬಹುದಾದದ್ದು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌, ಅಂದರೆ ಕೆಳಮನೆ; ನಮ್ಮ ರಾಜ್ಯಸಭೆಗೆ ಹೋಲಿಸಬಹುದಾದದ್ದು ಸೆನೆಟ್‌, ಅಂದರೆ ಮೇಲ್ಮನೆ.

ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ 435 ಸದಸ್ಯರಿದ್ದು ಇವರಿಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಇವರ ಅಧಿಕಾರವಧಿ ಕೇವಲ 2 ವರ್ಷ ಮಾತ್ರ. ಸೆನೆಟ್‌ ನಮ್ಮ ರಾಜ್ಯಸಭೆಯಂತೆ. ಇಲ್ಲಿ 100 ಸದಸ್ಯರಿದ್ದು ಪ್ರತೀ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗ ಸದಸ್ಯರ ಅವಧಿ ಕೊನೆಯಾಗುತ್ತದೆ. ಈ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಇವರ ಅಧಿಕಾರಾವಧಿ 6 ವರ್ಷಗಳಾಗಿದ್ದು ಸದ್ಯ 35 ಸೆನೆಟ್‌ ಸ್ಥಾನಗಳಿಗೆ ಚುನಾವಣೆ ನಡೆದಿದೆ.

ಸೆನೆಟ್‌ನಲ್ಲಿ ಪ್ರಾಬಲ್ಯ ಉಳಿಸಿಕೊಂಡ ಟ್ರಂಪ್‌

35 ಸ್ಥಾನಗಳಲ್ಲಿ 31 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ರಿಪಬ್ಲಿಕನ್‌ ಪಾರ್ಟಿ 9 ಸ್ಥಾನಗಳಲ್ಲಿ ಗೆದ್ದು ಒಟ್ಟಾರೆ ಸೆನೆಟ್‌ನಲ್ಲಿ ತನ್ನ ಬಲವನ್ನು 51ಕ್ಕೆ ಏರಿಕೆ ಮಾಡಿಕೊಂಡಿದೆ. ಈ ಮೂಲಕ 100 ಸದಸ್ಯ ಬಲದ ಮೇಲ್ಮನೆಯಲ್ಲಿ ಸರಳ ಬಹುಮತ ಗಿಟ್ಟಿಸಿದೆ. ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಗಳು ದುಪ್ಪಟ್ಟು ಸ್ಥಾನಗಳಲ್ಲಿ ಅಂದರೆ 20 ಕಡೆ ಗೆದ್ದರೂ ಸೆನೆಟ್‌ನಲ್ಲಿ ಸದ್ಯ ಕೇವಲ 45 ಜನರಿದ್ದಾರೆ. ಇನ್ನೆರಡು ಸ್ಥಾನಗಳು ಇತರರ ಪಾಲಾಗಿದ್ದು 4 ಕ್ಷೇತ್ರಗಳ ಫಲಿತಾಂಶ ಇನ್ನೂ ಹೊರ ಬಿದ್ದಿಲ್ಲ.

ಕೆಳಮನೆಯಿಂದ ಟ್ರಂಪ್‌ಗೆ ಗೇಟ್‌ಪಾಸ್‌

ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಎಂದು ಕರೆಯಲಾಗುವ ಕೆಳಮನೆಯಲ್ಲಿ ಟ್ರಂಪ್‌ ಪಕ್ಷ ಧೂಳೀಪಟವಾಗಿದೆ. 435 ಸದಸ್ಯ ಬಲದ ಸಭೆಯಲ್ಲಿ ಬಹುಮತಕ್ಕೆ 218 ಸ್ಥಾನಗಳು ಅಗತ್ಯವಾಗಿದ್ದು ಡೆಮಾಕ್ರಾಟಿಕ್‌ ಪಕ್ಷ 219 ಸ್ಥಾನಗಳನ್ನು ಬಾಚಿಕೊಂಡು ಮುಂದಡಿ ಇಟ್ಟಿದೆ. ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಾರ್ಟಿ 193 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದೆ. ಇನ್ನೂ 23 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಿದ್ದು ಸೋಲಿನ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಕಳೆದ ಬಾರಿಯ ಒಟ್ಟು 26 ಸ್ಥಾನಗಳನ್ನು ರಿಪಬ್ಲಿಕನ್‌ ಪಕ್ಷ ಕಳೆದುಕೊಂಡಿದೆ. ಇವೆಲ್ಲ ಸ್ಥಾನಗಳನ್ನೂ ಡೆಮಾಕ್ರಾಟಿಕ್‌ ಪಕ್ಷ ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಗವರ್ನರ್‌ ಚುನಾವಣೆಯಲ್ಲೂ ಟ್ರಂಪ್‌ಗೆ ಹಿನ್ನಡೆ

ಇನ್ನು 36 ರಾಜ್ಯಗಳ ಗವರ್ನರ್‌ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 33ರ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಡೆಮಾಕ್ರಾಟಿಕ್‌ 15ನ್ನು ಗೆದ್ದುಕೊಂಡಿದ್ದು ಒಟ್ಟಾರೆ 50 ರಾಜ್ಯಗಳ ಪೈಕಿ 22 ರಲ್ಲಿ ಸದ್ಯ ಅಧಿಕಾರ ಹಿಡಿದಿದೆ. ರಿಪಬ್ಲಿಕನ್‌ ಪಕ್ಷ ಈ ಚುನಾವಣೆಯಲ್ಲಿ 18ರಲ್ಲಿ ಗೆದ್ದು ಒಟ್ಟು 25 ರಾಜ್ಯಗಳಲ್ಲಿ ಅಧಿಕಾರಕ್ಕೇರಿದೆ. ಈ ಚುನಾವಣೆಯಲ್ಲಿ ಒಟ್ಟು 7 ರಾಜ್ಯಗಳ ಅಧಿಕಾರವನ್ನು ಡೆಮಾಕ್ರಾಟಿಕ್‌ ಪಕ್ಷ ರಿಪಬ್ಲಿಕನ್‌ ಪಾರ್ಟಿ ಕೈಯಿಂದ ಕಸಿದುಕೊಂಡಿದೆ.

ಹೀಗೆ ಅಧಿಕಾರಕ್ಕೆ ಬಂದ ಕೇವಲ ಎರಡು ವರ್ಷಗಳಲ್ಲೇ ಟ್ರಂಪ್‌ ಜನರ ಭರವಸೆ ಕಳೆದುಕೊಂಡಿದ್ದಾರೆ ಎಂಬುದು ಈ ಚುನಾವಣೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ.