ಬಳ್ಳಾರಿಯಲ್ಲಿ ಉಗ್ರಪ್ಪಗೆ ಭರ್ಜರಿ ಗೆಲುವು, ಐದರಲ್ಲಿ ನಾಲ್ಕು ಕ್ಷೇತ್ರ ‘ಮೈತ್ರಿ’ ಪಾಲು
ಸುದ್ದಿ ಸಾರ

ಬಳ್ಳಾರಿಯಲ್ಲಿ ಉಗ್ರಪ್ಪಗೆ ಭರ್ಜರಿ ಗೆಲುವು, ಐದರಲ್ಲಿ ನಾಲ್ಕು ಕ್ಷೇತ್ರ ‘ಮೈತ್ರಿ’ ಪಾಲು

ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ತನ್ನ ಬುಟ್ಟಿಗೆ ಹಾಕಿಕೊಂಡು ಬೀಗಿದೆ.

ಎರಡು ವಿಧಾನಸಭಾ ಕ್ಷೇತ್ರಗಳು ಮತ್ತು ಮೂರು ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ನಾಲ್ಕನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಬಾಚಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮತ್ತು ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ನಡುವೆ ತುರುಸಿನ ಸ್ಪರ್ಧೆ ಇದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಭರ್ಜರಿ ಜಯ ದಾಖಲಿಸಿದ್ದರೆ, ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಅಧಿಕಾರಯುತ ಗೆಲುವು ದಾಖಲಿಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬಲು ದೊಡ್ಡ ಅಂತರದಲ್ಲಿ ಜಯಶಾಲಿಯಾಗಿದ್ದರೆ, ಜಮಖಂಡಿಯಲ್ಲಿ ಕಾಂಗ್ರೆಸ್‌ನ ಆನಂದ್‌ ನ್ಯಾಮಗೌಡ ಗೆಲುವಿನ ಮಾಲೆ ಧರಿಸಿದ್ದಾರೆ.

ಶಿವಮೊಗ್ಗದಲ್ಲಿ ಆರಂಭದಿಂದಲೂ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ಭಾರೀ ಪೈಪೋಟಿ ಇದ್ದು ಯಾರು ಜಯಶಾಲಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಐದು ಕ್ಷೇತ್ರಗಳಿಗೆ ಶನಿವಾರ ನವೆಂಬರ್‌ 3ರಂದು ಉಪಚುನಾವಣೆಯ ಮತದಾನ ನಡೆದಿತ್ತು. ಇಂದು ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಫಲಿತಾಂಶ ಒಂದೊಂದಾಗಿ ಹೊರ ಬರುತ್ತಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಉಪಚುನಾವಣೆ ನಡೆದಿದೆ. ಇಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಇಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರಿಂದ ಇಲ್ಲಿ ಅನಿತಾ ಸುಲಭ ಗೆಲುವು ಸಾಧಿಸಿದ್ದಾರೆ.

ಮಂಡ್ಯ ಲೋಕಸಭಾ ಸದಸ್ಯರಾಗಿದ್ದ ಸಿ.ಎಸ್‌. ಪುಟ್ಟರಾಜು ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಇಲ್ಲಿ ಉಪಚುನಾವಣೆ ನಡೆದಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿರುವ ಎಲ್‌.ಆರ್‌. ಶಿವರಾಮೇಗೌಡ ಇಲ್ಲಿ ಸರಳ ಗೆಲುವಿನ ಲೆಕ್ಕಾಚಾರದಲ್ಲಿದ್ದರು. ಅದರಂತೆ ಅವರು ಇದೀಗ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಸೋಲು ಕಂಡಿದ್ದಾರೆ.

ಬಳ್ಳಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬಿ. ಶ್ರೀರಾಮುಲು ಕೂಡ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಉಪ ಚುನಾವಣೆ ನಡೆಯಿತು. ಅವರ ತಂಗಿ ಜೆ. ಶಾಂತಾ ಇಲ್ಲಿ ಬಿಜೆಪಿಯಿಂದ ಕಣದಲ್ಲಿದ್ದರು. ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಇಲ್ಲಿ ಗೆದ್ದು ಬೀಗಿದ್ದಾರೆ.

ಶಿವಮೊಗ್ಗ ಸಂಸದರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಇಲ್ಲಿ ಉಪಚುನಾವಣೆ ನಡೆಯಿತು. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರೆ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ. ಇಬ್ಬರ ನಡುವೆಯೂ ಇಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.

ಇನ್ನು ಜಮಖಂಡಿಯಲ್ಲಿ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ನಿಧನದಿಂದ ಚುನಾವಣೆ ನಡೆಯಿತು. ಇಲ್ಲಿ ಅವರ ಪುತ್ರ ಆನಂದ್‌ ನ್ಯಾಮಗೌಡ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಅನುಕಂಪದ ಮತಗಳ ಮೇಲೆ ಗೆಲುವಿನ ದಡ ಸೇರಿದ್ದಾರೆ. ಇಲ್ಲಿ ಬಿಜೆಪಿಯ ಶ್ರೀಕಾಂತ್‌ ಕುಲಕರ್ಣಿ ಸೋಲೊಪ್ಪಿಕೊಂಡಿದ್ದಾರೆ.