samachara
www.samachara.com
ಜಮ್ಮು- ಕಾಶ್ಮೀರದ ಬಿಜೆಪಿ ಮುಖಂಡ ಅನಿಲ್‌ ಪರಿಹಾರ್‌ ಮೇಲೆ ಗುಂಡಿನ ದಾಳಿ
ಸುದ್ದಿ ಸಾರ

ಜಮ್ಮು- ಕಾಶ್ಮೀರದ ಬಿಜೆಪಿ ಮುಖಂಡ ಅನಿಲ್‌ ಪರಿಹಾರ್‌ ಮೇಲೆ ಗುಂಡಿನ ದಾಳಿ

ನವೆಂಬರ್ 17ರಿಂದ ನಡೆಯಲಿರುವ ಸ್ಥಳೀಯ ಪಂಚಾಯತ್‌ ಚುನಾವಣೆಗೂ ಮುನ್ನಾ ಈ ಘಟನೆ ನಡೆದಿದ್ದು, ಇದು ರಾಜಕೀಯ ದಾಳಿಯೋ ಅಥವಾ ಉಗ್ರರ ಕೃತ್ಯವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್‌ ಪರಿಹಾರ್‌ ಮತ್ತು ಅವರ ತಮ್ಮ ಅಜಿತ್‌ ಪರಿಹಾರ್‌ ಅವರನ್ನು ಕಿಶ್ತ್‌ವಾಡ್‌ ಪಟ್ಟಣದಲ್ಲಿ ಗುರುವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯಿಂದ ಕಿಶ್ತ್‌ವಾಡ್‌ ಪಟ್ಟಣ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ.

ನವೆಂಬರ್ 17ರಿಂದ ನಡೆಯಲಿರುವ ಸ್ಥಳೀಯ ಪಂಚಾಯತ್‌ ಚುನಾವಣೆಗೂ ಮುನ್ನಾ ಈ ಘಟನೆ ನಡೆದಿದ್ದು, ಇದು ರಾಜಕೀಯ ದಾಳಿಯೋ ಅಥವಾ ಉಗ್ರರ ಕೃತ್ಯವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿ ಮುಖಂಡ ಸೇವಾ ರಾಮ್‌ ಪರಿಹಾರ್‌ ಅವರ ಪುತ್ರ ಅನಿಲ್‌ ಪರಿಹಾರ್‌ ಮುಸ್ಲಿಮರ ವಿಶ್ವಾಸವನ್ನೂ ಗಳಿಸಿದ್ದ ಸ್ಥಳೀಯ ಮಟ್ಟದ ಪ್ರಭಾವಿ ರಾಜಕಾರಣಿಯಾಗಿದ್ದರು.

ಅನಿಲ್‌ ಪರಿಹಾರ್‌ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರ ಪರಿಹಾರ್‌ ಪಾರ್ಥಿವ ಶರೀರವಿದ್ದ ಸ್ಥಳೀಯ ಆಸ್ಪತ್ರೆಗೆ ಜಮಾಯಿಸಿದರು. ಈ ವೇಳೆ ಜನರ ಗುಂಪಿಗೂ, ಪೊಲೀಸರಿಗೂ ಘರ್ಷಣೆ ಉಂಟಾಗಿ, ಸ್ಥಳೀಯ ಆಡಳಿತ ಕರ್ಫ್ಯೂ ವಿಧಿಸುವುದು ಅನಿವಾರ್ಯವಾಯಿತು.

ಪರಿಹಾರ್‌ ಸೋದರರು ಟಪಾಲ್‌ ಗಲ್ಲಿಯ ತಮ್ಮ ಅಂಗಡಿಯಿಂದ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರು ಮನೆಯ ಕೂಗಳತೆ ದೂರದಲ್ಲಿದ್ದಾಗ ಅಪರಿಚಿತ ದುಷ್ಕರ್ಮಿ ಅವರಿಬ್ಬರಿಗೆ ಹತ್ತಿರದಿಂದಲೇ ಗುಂಡಿಕ್ಕಿ ಪರಾರಿಯಾಗಿದ್ದಾನೆ. ಅನಿಲ್‌ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರ ಗಾಯಗೊಂಡಿದ್ದ ಅಜಿತ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ದಾಳಿಕೋರನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದ ಅನಿಲ್‌ ಅವರಿಗೆ ಭದ್ರತೆಯನ್ನೂ ಒದಗಿಸಲಾಗಿತ್ತು. ಆದರೆ, ಘಟನೆ ನಡೆದ ವೇಳೆ ಭದ್ರತಾ ಸಿಬ್ಬಂದಿ ಅವರೊಂದಿಗೆ ಇರಲಿಲ್ಲ ಎನ್ನಲಾಗಿದೆ. ಸದ್ಯ ಕಿಶ್ತ್‌ವಾಡ್‌ ಪಟ್ಟಣದಲ್ಲಿ ಭಾರತೀಯ ಸೇನೆಯ ಯೋಧರು ಬೀಡುಬಿಟ್ಟಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿಕೊಂಡಿದೆ.