samachara
www.samachara.com
ಹೊಸ MSME ಸಾಲ ಘೋಷಿಸಿದ ಮೋದಿ; 59 ನಿಮಿಷದಲ್ಲಿ 1 ಕೋಟಿವರೆಗೆ ಸಾಲ!
ಸುದ್ದಿ ಸಾರ

ಹೊಸ MSME ಸಾಲ ಘೋಷಿಸಿದ ಮೋದಿ; 59 ನಿಮಿಷದಲ್ಲಿ 1 ಕೋಟಿವರೆಗೆ ಸಾಲ!

ಸಣ್ಣ ಉದ್ದಿಮೆದಾರರು ಸಾಲಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ 59 ನಿಮಿಷಗಳಲ್ಲಿ ಅರ್ಹತೆಯ ಆಧಾರದ ಮೇಲೆ ಸಾಲ ಮಂಜೂರಾತಿ ಪಡೆಯಬಹುದಾಗಿದೆ.

ಮರುಪಾವತಿಯಾಗದ ಸಾಲಕ್ಕೆ ಆರ್‌ಬಿಐ ಹೊಣೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಆರ್‌ಬಿಐ ಮೇಲೆ ಗೂಬೆ ಕೂರಿಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ (ಎಂಎಸ್‌ಎಂಇ) 59 ನಿಮಿಷದ ಸಾಲ ಮಂಜೂರಾತಿ ಯೋಜನೆ ಘೋಷಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಸಣ್ಣ ಉದ್ದಿಮೆದಾರರು 59 ನಿಮಿಷಗಳಲ್ಲಿ 1 ಕೋಟಿ ರೂಪಾಯಿವರೆಗೆ ಸಾಲ ಮಂಜೂರಾತಿ ಪಡೆಯುವ ವಿಶೇಷ ಪೋರ್ಟಲ್‌ www.psbloansin59minutes.com ಗೆ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ.

ಈ ಪೋರ್ಟಲ್‌ ಮೂಲಕ ಸಣ್ಣ ಉದ್ದಿಮೆದಾರರು ಸಾಲಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ 59 ನಿಮಿಷಗಳಲ್ಲಿ ಅರ್ಹತೆಯ ಆಧಾರದ ಮೇಲೆ ಸಾಲ ಮಂಜೂರಾತಿ ಪಡೆಯಬಹುದಾಗಿದೆ. ಅವರ ಜಿಎಸ್‌ಟಿ ವಹಿವಾಟು, ಆದಾಯ ತೆರಿಗೆ ರಿಟರ್ನ್ಸ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅನ್ನು ಪರಿಶೀಲಿಸಿ ಸಾಲ ಮಂಜೂರಾತಿ ಮಾಡುವ ಸ್ವಯಂಚಾಲಿತ ವ್ಯವಸ್ಥೆಯನ್ನು ಈ ಪೋರ್ಟಲ್‌ ಒಳಗೊಂಡಿದೆ.

ಸಾಲದ ಅನುಮೋದನೆ ಸಿಕ್ಕ ವಾರದೊಳಗೆ ಸಣ್ಣ ಉದ್ದಿಮೆದಾರರ ಬ್ಯಾಂಕ್‌ ಖಾತೆಗೆ ಸಾಲದ ಹಣ ಜಮೆಯಾಗುತ್ತದೆ. ಜಿಎಸ್‌ಟಿಗೆ ನೋಂದಣಿಯಾಗಿರುವ ಸಣ್ಣ ಉದ್ದಿಮೆದಾರರು 1 ಕೋಟಿವರೆಗಿನ ಸಾಲಕ್ಕೆ ಶೇಕಡ 2ರಷ್ಟು ಬಡ್ಡಿ ರಿಯಾಯಿತಿ ಪಡೆಯಲಿದ್ದಾರೆ ಎಂದು ಮೋದಿ ಘೋಷಿಸಿದ್ದಾರೆ.

ದೊಡ್ಡ ಕಂಪೆನಿಗಳಿಂದ ಬರಬೇಕಾದ ಬಿಲ್‌ ಬಾಕಿ ವಿಳಂಬವಾಗಿ ವ್ಯವಹಾರಕ್ಕೆ ತೊಡಕಾಗುತ್ತಿರುವ ಸಂದರ್ಭಗಳಲ್ಲಿ ಸಣ್ಣ ಉದ್ದಿಮೆದಾರರು ಬಾಕಿ ಬಿಲ್‌ಗಳ ಆಧಾರದ ಮೇಲೆಯೇ ಸಾಲ ಮಂಜೂರಾತಿ ಪಡೆಯಬಹುದು. ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಸಣ್ಣ ಉದ್ದಿಮೆಯ ಉತ್ತೇಜನಕ್ಕೆ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಮೋದಿ ಹೇಳಿದ್ದಾರೆ.