ಕಾಂಗ್ರೆಸ್‌ ಜತೆ ಕೈ ಜೋಡಿಸಿದ ತೆಲುಗು ದೇಶಂ; ಬಿಜೆಪಿ ಮಣಿಸಲು ಹಳೆಯ ಶತ್ರುಗಳ ದೋಸ್ತಿ!
ಸುದ್ದಿ ಸಾರ

ಕಾಂಗ್ರೆಸ್‌ ಜತೆ ಕೈ ಜೋಡಿಸಿದ ತೆಲುಗು ದೇಶಂ; ಬಿಜೆಪಿ ಮಣಿಸಲು ಹಳೆಯ ಶತ್ರುಗಳ ದೋಸ್ತಿ!

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಎದುರಿಸಲು ಟಿಡಿಪಿಗೆ ಈಗ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವುದು ಅನಿವಾರ್ಯವಾಗಿದೆ.

ರಾಜಕೀಯದಲ್ಲಿ ಯಾವುದೂ ಹೀಗೇ ಎಂದು ಹೇಳಲು ಬರುವುದಿಲ್ಲ. ರಾಜಕೀಯದಲ್ಲಿ ಯಾರು ಶತ್ರುವೂ ಅಲ್ಲ, ಯಾರು ಮಿತ್ರರೂ ಅಲ್ಲ. ಇಷ್ಟು ವರ್ಷಗಳ ಕಾಲ ಶತ್ರುಗಳಾಗಿದ್ದ ಪಕ್ಷಗಳು ಮತ್ತೊಂದು ರಾಷ್ಟ್ರೀಯ ಪಕ್ಷವನ್ನು ಮಣಿಸಲೇಬೇಕೆಂಬ ಉದ್ದೇಶದಿಂದ ಇಂದು ಮಿತ್ರತ್ವ ಬೆಳೆಸಿಕೊಂಡಿವೆ.

ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವುದಾಗಿ ಘೋಷಿಸಿದ್ದಾರೆ.

“ದೇಶದ ಉಳಿವಿಗಾಗಿ ನಾವು ಈಗ ಒಂದಾಗಿದ್ದೇವೆ. ನಾವು ಹಳೆಯದನ್ನು ಮರೆತು ಪ್ರಜಾಪ್ರಭುತ್ವ ಮಾರ್ಗದಲ್ಲಿ ಕೈ ಜೋಡಿಸಿದ್ದೇವೆ. ವಿಪಕ್ಷಗಳೆಲ್ಲವೂ ಈಗ ಒಂದಾಗಬೇಕಾದ ಅಗತ್ಯವಿದೆ” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ದಶಕಗಳ ಕಾಲ ಎನ್‌ಡಿಎ ಮಿತ್ರಪಕ್ಷವಾಗಿದ್ದ ಟಿಡಿಪಿ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಎನ್‌ಡಿಎ ಮೈತ್ರಿ ಕಡಿದುಕೊಂಡಿತ್ತು. ತೆಲಂಗಾಣ ಚುನಾವಣೆ ಹತ್ತಿರದಲ್ಲಿರುವ ಹೊತ್ತಿನಲ್ಲಿ ನಾಯ್ಡು ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಾರೆ.

“ನಾವಿಬ್ಬರೂ ಹಿಂದೆ ಏನಾಗಿತ್ತೋ ಅದನ್ನು ಮರೆಯಲು ನಿರ್ಧರಿಸಿದ್ದೇವೆ. ಬಿಜೆಪಿಯನ್ನು ಸೋಲಿಸಬೇಕೆಂಬುದೇ ಇದಕ್ಕೆ ಕಾರಣ. ನಾನು ಭೂತಕಾಲದ ಬಗ್ಗೆ ಯೋಚಿಸುವುದಿಲ್ಲ, ನಮ್ಮ ದೃಷ್ಟಿ ಭವಿಷ್ಯದ ಕಡೆಗಿದೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಯುಪಿಎ ಬಲವನ್ನು ಹೆಚ್ಚಿಸಿಕೊಳ್ಳುವ ಕಾಂಗ್ರೆಸ್‌ ಯೋಜನೆ ಈಗ ಟಿಡಿಪಿ ಶಕ್ತಿಯೂ ಸೇರಿಕೊಂಡಂತಾಗಿದೆ.

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಎದುರಿಸಲು ಟಿಡಿಪಿಗೆ ಈಗ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವುದು ಅನಿವಾರ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿ ನಿಲ್ಲಲು ಈಗ ಟಿಡಿಪಿ ಹಳೆಯ ಶತ್ರು ಕಾಂಗ್ರೆಸ್‌ ಬಳಗಕ್ಕೆ ಸೇರಿಕೊಂಡಿದೆ.

90ರ ದಶಕದಿಂದಲೂ ಎನ್‌ಡಿಎ ಮೈತ್ರಿಕೂಟದ ಜತೆಗೆ ಗುರುತಿಸಿಕೊಂಡಿದ್ದ ಟಿಡಿಪಿ ಕೇಂದ್ರದ ಎನ್‌ಡಿಎ ಸರಕಾರ ಆಂಧ್ರಪ್ರದೇಶವನ್ನು ಕಡೆಗಣಿಸುತ್ತಿದೆ ಎಂಬ ಕಾರಣಕ್ಕೆ ಎನ್‌ಡಿಎ ಮೈತ್ರಿ ಮುರಿದುಕೊಂಡಿದ್ದರು.

Also read: ಎನ್‌ಡಿಎ ಮೈತ್ರಿ ಕಡಿದುಕೊಂಡ ಟಿಡಿಪಿ; ಮಿತ್ರಪಕ್ಷಗಳನ್ನು ಕಡೆಗಣಿಸುತ್ತಿದೆಯೇ ಬಿಜೆಪಿ?