samachara
www.samachara.com
ನಕ್ಸಲರಿಂದ ದೂರದರ್ಶನ ಕ್ಯಾಮರಾಮನ್‌, ಇಬ್ಬರು ಪೊಲೀಸರ ಹತ್ಯೆ
ಸುದ್ದಿ ಸಾರ

ನಕ್ಸಲರಿಂದ ದೂರದರ್ಶನ ಕ್ಯಾಮರಾಮನ್‌, ಇಬ್ಬರು ಪೊಲೀಸರ ಹತ್ಯೆ

ಮಂಗಳವಾರ ಮುಂಜಾನೆ ದಾಂತೆವಾಡ ಜಿಲ್ಲೆಯಲ್ಲಿ ಹೊಂಚು ಹಾಕಿ ಕುಳಿತ ನಕ್ಸಲರು ದೂರದರ್ಶನ್‌ ಕ್ಯಾಮರಾಮನ್‌ ಮತ್ತು ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ.

ಮಾವೋವಾದಿ ಬಂಡುಕೋರರು ನಡೆಸಿದ ದಾಳಿಗೆ ದೂರದರ್ಶನದ ಕ್ಯಾಮರಾಮನ್‌ ಮತ್ತು ಇಬ್ಬರು ಪೊಲೀಸರು ಅಸುನೀಗಿರುವ ಘಟನೆ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅರನ್‌ಪುರ್‌ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಮುಂಜಾನೆ ಇಲ್ಲಿ ನಕ್ಸಲರು ಹೊಂಚು ಹಾಕಿ ಕುಳಿತು ಮೂವರನ್ನೂ ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ. ನಿನ್ನೆಯಷ್ಟೇ ನಕ್ಸಲರು ಕೇಂದ್ರ ಪ್ಯಾರಮಿಲಿಟರಿ ಪಡೆ ವಾಹನವನ್ನು ಸ್ಫೋಟಿಸಿ ನಾಲ್ಕು ಜನರನ್ನು ಕೊಂದಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದಾಳಿ ನಡೆದಿದೆ.

ಇಂದು ಗಸ್ತಿಗೆ ತೆರಳುತ್ತಿದ್ದ ನಮ್ಮ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ ಎಂಬುದಾಗಿ ಡೆಪ್ಯುಟಿ ಐಜಿಪಿ ಸುಂದರ್‌ರಾಜ್‌ ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಸಾವನ್ನಪ್ಪಿದವರನ್ನು ದೂರದರ್ಶನ ಕ್ಯಾಮರಾಮನ್‌ ಅಚ್ಯುತಾನಂದ ಸಾಹು, ಸಬ್‌ ಇನ್ಸ್‌ಪೆಕ್ಟರ್‌ ರುದ್ರ ಪ್ರತಾಪ್‌, ಇನ್ನೊಬ್ಬರು ಸಹಾಯಕ ಪೇದೆ ಎಂದು ಗುರುತಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಚುನಾವಣೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಸೆರೆಹಿಡಿಯಲು ದೂರದರ್ಶನದ ಕ್ಯಾಮರಾಮನ್‌ ಭದ್ರತಾ ಸಿಬ್ಬಂದಿಗಳ ಜತೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ಛತ್ತೀಸ್‌ಗಢದಲ್ಲಿ ಅಪಾರ ಖನಿಜ ಸಂಪತ್ತಿದೆ. ಇಲ್ಲಿ ಗಣಿಗಾರಿಕೆ ಮಾಡಲು ದೊಡ್ಡ ದೊಡ್ಡ ಕಂಪನಿಗಳು ಹೊಂಚು ಹಾಕಿ ಕುಳಿತಿರುತ್ತವೆ. ಈ ಸಂದರ್ಭದಲ್ಲಿ ಬುಡಕಟ್ಟು ಜನಾಂಗಗಳಿಗೆ ಅಪಾಯವಾಗದಿರಲೆಂದು ಅವರ ಪರ ನಕ್ಸಲರು ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ವೇಳೆ ಗೆರಿಲ್ಲಾ ಮಾದರಿಯಲ್ಲಿ ಭಾರತದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದ್ದಾರೆ. ಉದಾಹರಣೆ 2010ರಲ್ಲಿ ಛತ್ತೀಸ್‌ಗಢದ ಇದೇ ದಾಂತೆವಾಡ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 74 ಪೊಲೀಸರು ಸಾವನ್ನಪ್ಪಿದ್ದರು.

ಇದೀಗ ಸ್ಥಳಕ್ಕೆ ವರದಿಗಾರಿಕೆಗೆ ಎಂದು ತೆರಳಿದ್ದ ಕ್ಯಾಮರಾಮನ್‌ ಮತ್ತು ಇಬ್ಬರು ಪೊಲೀಸರನ್ನು ನಕ್ಸಲರು ಕೊಂದು ಹಾಕಿದ್ದಾರೆ. ಮಾವೋವಾದಿಗಳ ಈ ದಾಳಿಯನ್ನು ಪ್ರಸಾರ ಭಾರತಿ ಸಿಇಒ ಶಶಿಶೇಖರ್‌, ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್‌ ಸಿಂಗ್‌ ಮತ್ತು ಹಲವಾರು ಕೇಂದ್ರ ಸಚಿವರು ಹಾಗೂ ರಾಜಕಾರಣಿಗಳು ಖಂಡಿಸಿದ್ದಾರೆ.