ಅಯೋಧ್ಯೆ ಪ್ರಕರಣ:  ಜನವರಿಯಲ್ಲಿ ವಿಚಾರಣೆ ದಿನಾಂಕ ನಿಗದಿಗೆ ಸುಪ್ರೀಂ ನಿರ್ಧಾರ
ಸುದ್ದಿ ಸಾರ

ಅಯೋಧ್ಯೆ ಪ್ರಕರಣ: ಜನವರಿಯಲ್ಲಿ ವಿಚಾರಣೆ ದಿನಾಂಕ ನಿಗದಿಗೆ ಸುಪ್ರೀಂ ನಿರ್ಧಾರ

ಚುನಾವಣೆಗೆ ಮುನ್ನಾ ತೀರ್ಪು ಬಂದರೂ, ಬರದಿದ್ದರೂ ಈ ಬಾರಿಯೂ ಬಿಜೆಪಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಚುನಾವಣಾ ವಿಷಯಗಳಲ್ಲೊಂದು ಎಂಬುದು ಗುಟ್ಟೇನೂ ಅಲ್ಲ.

ಅಯೋಧ್ಯೆ ಪ್ರಕರಣದ ವಿಚಾರಣೆಯ ದಿನಾಂಕವನ್ನು 2019ರ ಜನವರಿಯಲ್ಲಿ ನಿಗದಿಪಡಿಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್‌ ಪ್ರಕರಣ ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.

“ಅಯೋಧ್ಯೆ ಪ್ರಕರಣಗಳ ವಿಚಾರಣೆಗಾಗಿ ಸೂಕ್ತ ನ್ಯಾಯಪೀಠವನ್ನು ರಚಿಸಲಾಗುವುದು ಹಾಗೂ ಆ ನ್ಯಾಯಪೀಠವು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಹೇಳಿದ್ದಾರೆ.

ವಿವಾದಿತ ರಾಮ ಜನ್ಮಭೂಮಿ - ಬಾಬ್ರಿ ಮಸೀದಿಯ ಜಾಗವನ್ನು ಮೂರು ಭಾಗಗಳಾಗಿ ಹಂಚಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಲವು ಮೇಲ್ಮನವಿಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ. ಈ ಎಲ್ಲಾ ಮೇಲ್ಮನವಿಗಳ ವಿಚಾರಣೆಯನ್ನು ಒಂದೇ ವಿಶೇಷ ಪೀಠದಲ್ಲಿ ನಡೆಸಲು ಸುಪ್ರೀಂಕೋರ್ಟ್‌ ತೀರ್ಮಾನಿಸಿದೆ.

ಸೆಪ್ಟೆಂಬರ್ 27ರಂದು ಅಯೋಧ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ನ್ಯಾಯಪೀಠವು, “ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ” ಎಂಬುದನ್ನು ಎತ್ತಿ ಹೇಳಿತ್ತು. ಈ ಮೂಲಕ ಅಯೋಧ್ಯೆ ಪ್ರಕರಣದ ವಿಚಾರಣೆಯ ಹಾದಿ ಸುಗಮಗೊಳಿಸಿಕೊಂಡಿದ್ದ ಕೋರ್ಟ್‌ ಇಂದಿಗೆ (ಅಕ್ಟೋಬರ್ 29) ವಿಚಾರಣೆಯನ್ನು ಮುಂದೂಡಿತ್ತು.

1994ರ ಡಾ. ಇಸ್ಮಾಯಿಲ್‌ ಫಾರೂಕಿ ತೀರ್ಪು ಎಂದು ಕರೆಯಲಾಗುವ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನಲ್ಲಿ, ‘ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’ ಎಂದು ಹೇಳಲಾಗಿತ್ತು. ಸುಪ್ರೀಂಕೋರ್ಟ್‌ ಈ ತೀರ್ಪನ್ನು 2:1ರ ಬಹುಮತದಲ್ಲಿ ಎತ್ತಿ ಹಿಡಿದಿತ್ತು. ಈ ತೀರ್ಪಿನ ಬಗ್ಗೆ ಪರಾಮರ್ಶೆ ಅಗತ್ಯವಿಲ್ಲ ಎಂದು ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿತ್ತು.

Also read: ‘ರಾಮ ಮಂದಿರ ನಿರ್ಮಾಣದ ಬಗ್ಗೆ ಸಂದೇಹ ಬೇಡ’; ಚುನಾವಣೆ ಹೊಸ್ತಿಲಲ್ಲಿ ಅಯೋಧ್ಯೆ ನೆನಪಿಸಿದ ಯೋಗಿ!

2010ರಲ್ಲಿ ಅಲಹಾಬಾದ್‌ ನ್ಯಾಯಾಲಯ 2.77 ಎಕರೆಗಳ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ವಿಭಾಗಿಸಬೇಕು ಎಂಬ ಆದೇಶ ನೀಡಿತ್ತು. ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್‌ ಲಲ್ಲಾ ಮಂದಿರಗಳಿಗೆ ಸಮಾನವಾಗಿ ಈ ಭೂಮಿಯನ್ನು ಹಂಚಿಕೆ ಮಾಡುವಂತೆ 2:1ರ ಬಹುಮತದ ಆದೇಶವನ್ನು ನ್ಯಾಯಪೀಠ ನೀಡಿತ್ತು.

ಸೆಪ್ಟೆಂಬರ್‌ 27ರಂದು ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯದಿಂದ ಬಿಜೆಪಿಗೆ ಅನುಕೂಲವಾಗುವ ಎಲ್ಲಾ ಲಕ್ಷಣಗಳೂ ಕಂಡಿದ್ದವು. ಇದೇ ಭರವಸೆಯ ಮೇಲೆ ಕಾನೂನು ಪ್ರಕಾರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಉತ್ಸಾಹದಲ್ಲಿ ಬಿಜೆಪಿ ಬೆಂಬಲಿಗರಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ಸುಪ್ರೀಂಕೋರ್ಟ್‌ನಲ್ಲಿ ಮಂದಿರ ನಿರ್ಮಾಣದ ಪರವಾಗಿ ತೀರ್ಪು ಬರುವ ವಿಶ್ವಾಸದಲ್ಲಿ ಬಿಜೆಪಿ ಇದೆ.

ವಿಶೇಷ ಪೀಠ ರಚನೆಯಾಗಿ ಜನವರಿಯಲ್ಲಿ ಅದು ವಿಚಾರಣೆಯ ದಿನಾಂಕ ನಿಗದಿ ಮಾಡುವುದರಿಂದ ಭಕ್ತರ ಕನಸಿಗೆ ಕೊಂಚ ಮಟ್ಟಿಗೆ ತಣ್ಣೀರೆರೆಚಿದಂತಾಗಿದೆ. ಒಂದು ವೇಳೆ ವಿಚಾರಣೆ ಪ್ರಕ್ರಿಯೆ ವಿಳಂಬವಾದರೆ ಚುನಾವಣೆಗೂ ಮುನ್ನವೇ ಅಯೋಧ್ಯೆ ಪ್ರಕರಣದ ತೀರ್ಪು ಹೊರಬೀಳುವುದು ಅನುಮಾನ. ಆದರೆ, ಚುನಾವಣೆಗೆ ಮುನ್ನಾ ತೀರ್ಪು ಬಂದರೂ, ಬರದಿದ್ದರೂ ಈ ಬಾರಿಯೂ ಬಿಜೆಪಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಚುನಾವಣಾ ವಿಷಯಗಳಲ್ಲೊಂದು ಎಂಬುದು ಗುಟ್ಟೇನೂ ಅಲ್ಲ.