samachara
www.samachara.com
189 ಜನರಿದ್ದ ಇಂಡೋನೇಷ್ಯಾದ ಐಷಾರಾಮಿ ವಿಮಾನ ಸಮುದ್ರದಲ್ಲಿ ಪತನ
ಸುದ್ದಿ ಸಾರ

189 ಜನರಿದ್ದ ಇಂಡೋನೇಷ್ಯಾದ ಐಷಾರಾಮಿ ವಿಮಾನ ಸಮುದ್ರದಲ್ಲಿ ಪತನ

ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಸುಮಾತ್ರಾ ದ್ವೀಪಕ್ಕೆ ತೆರಳುತ್ತಿದ್ದ ವಿಮಾನ ಸಮುದ್ರ ಮಧ್ಯೆ ಪತನವಾಗಿದೆ ಎಂದು ಅಲ್ಲಿನ ರಕ್ಷಣಾ ಸಂಸ್ಥೆ ಹೇಳಿದೆ. ವಿಮಾನದಲ್ಲಿ ಒಟ್ಟು 189 ಜನರಿದ್ದರು.

‘ಲಯನ್‌ ಏರ್‌’ ಸಂಸ್ಥೆಗೆ ಸೇರಿದ ಇಂಡೋನೇಷ್ಯಾದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡಿದೆ. ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಸುಮಾತ್ರಾ ದ್ವೀಪಕ್ಕೆ ತೆರಳುತ್ತಿದ್ದ ವಿಮಾನ ಸಮುದ್ರ ಮಧ್ಯೆ ಪತನವಾಗಿದೆ ಎಂದು ಅಲ್ಲಿನ ರಕ್ಷಣಾ ಸಂಸ್ಥೆ ಹೇಳಿದೆ. ವಿಮಾನದಲ್ಲಿ ಒಟ್ಟು 189 ಜನರಿದ್ದರು. ಇವರ ಇರುವಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿಲ್ಲ.

ಜಕಾರ್ತದಿಂದ ವಿಮಾನ ಟೇಕ್‌ಆಫ್‌ ಆದ 13 ನಿಮಿಷಗಳಲ್ಲೇ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೋಯಿಂಗ್‌ 737 ಮಾಕ್ಸ್‌ 8 ಸರಣಿಯ ವಿಮಾನ ಇದಾಗಿದ್ದು ಸ್ಥಳೀಯ ಕಾಲಮಾನ ಬೆಳಿಗ್ಗೆ 6.30 ನಿಮಿಷಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಸಂಪರ್ಕ ಕಳೆದುಕೊಂಡ ಜಾಗದಲ್ಲೇ ವಿಮಾನದ ಅವಶೇಷಗಳೂ ಪತ್ತೆಯಾಗಿವೆ. ಸುಮಾತ್ರಾದ ಪಂಗ್‌ಕಲ್‌ ಪಿನಂಗ್‌ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಪತನದ ವೇಳೆ 3,000 ಮೀಟರ್‌ ಎತ್ತರದಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಇದ್ದವರು ಏನಾದರೂ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದರಲ್ಲಿದ್ದ ಪ್ರಯಾಣಿಕರು ಉಳಿದುಕೊಂಡಿರುವ ಸಾಧ್ಯತೆ ಕ್ಷೀಣವಾಗಿದೆ ಎಂದು ಹುಡುಕಾಟ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಮುಹಮ್ಮದ್‌ ಸ್ಯಗಿ ಹೇಳಿದ್ದಾರೆ. ‘ನಮಗೆ ಪ್ರಯಾಣಿಕರು ಉಳಿದುಕೊಂಡಿರುವುದರ ಬಗ್ಗೆ ನಂಬಿಕೆ ಇದೆ. ನಾವು ಪ್ರಾರ್ಥಿಸುತ್ತೇವೆ. ಆದರೆ ಖಚಿತಪಡಿಸಲು ಸಾಧ್ಯವಿಲ್ಲ,’ ಎಂದವರು ತಿಳಿಸಿದ್ದಾರೆ.

2014ರಲ್ಲಿ ಏರ್‌ ಏಷ್ಯಾ ವಿಮಾನ ಇದೇ ರೀತಿ ಸಮುದ್ರದಲ್ಲಿ ಪತನಗೊಂಡು 162 ಜನರು ಸಾವನ್ನಪ್ಪಿದ್ದರು. ಇದೀಗ ನಡೆದಿರುವ ದುರಂತ ಹಳೆಯ ಘಟನೆಯನ್ನೂ ಮೀರಿಸಿದೆ. ವಿಮಾನದಲ್ಲಿ ಒಟ್ಟು ಮೂವರು ಮಕ್ಕಳು ಸೇರಿ 181 ಜನರು ಪ್ರಯಾಣಿಸುತ್ತಿದ್ದರು. ಇವರ ಜತೆ 8 ಜನ ಸಿಬ್ಬಂದಿಗಳೂ ಸಮುದ್ರದಲ್ಲಿ ಮುಳುಗಿದ್ದಾರೆ ಎಂದುಕೊಳ್ಳಲಾಗಿದೆ.

ಸದ್ಯ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು ಘಟನೆ ನಡೆದ ಸ್ಥಳಕ್ಕೆ ಮುಳುಗು ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಇದೆ ಸ್ಥಳದಲ್ಲಿ ಮೊಬೈಲ್‌ ಫೋನ್‌, ವಿಮಾನದ ಆಸನಗಳು ಪತ್ತೆಯಾಗಿವೆ ಎಂದು ತಿಳಿಸಿದು ಬಂದಿದೆ. ವಿಮಾನದಲ್ಲಿದ್ದ 189 ಜನರ ಬರುವಿಕೆಗಾಗಿ ನೂರಾರು ಜನರು ಪಂಗ್‌ಕಲ್‌ ಪಿನಂಗ್‌ ವಿಮಾನ ನಿಲ್ದಾಣದಲ್ಲಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಗತ್ತಿನಾದ್ಯಂತ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳು ಹಲವಾರು ಮಾರಾಟಗೊಂಡಿದ್ದು ಈ ಸರಣಿಯಲ್ಲಿ ವರದಿಯಾದ ಮೊದಲ ಅಪಘಾತ ಇದಾಗಿದೆ. ಅಪಘಾತದ ಬೆನ್ನಿಗೆಘಟನೆಯ ಮೇಲೆ ನಾವು ನಿಗಾ ಇಟ್ಟಿದ್ದೇವೆ’ ಎಂದು ಬೋಯಿಂಗ್‌ ಟ್ಟೀಟ್‌ ಮಾಡಿದೆ.

ಇಂಡೋನೇಷ್ಯಾ ದ್ವೀಪ ರಾಶಿಗಳನ್ನೇ ಹೊಂದಿದ್ದು ಇವುಗಳ ಸಂಪರ್ಕಕ್ಕೆ ದೇಶದಲ್ಲಿ ವಿಮಾನಯಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ‘ಲಯನ್‌ ಏರ್‌’ ಹೊಚ್ಚ ಹೊಸ ವಿಮಾನಯಾನ ಸಂಸ್ಥೆಯಾಗಿದ್ದು, ಸಣ್ಣ ಅವಧಿಯಲ್ಲಿ ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದು ನಿಂತಿತ್ತು.

ದೇಶದಲ್ಲಿ ಹೀಗೊಂದು ವಿಮಾನ ಸೇವೆ ಸಾಮಾನ್ಯವಾದರೂ ಅದಕ್ಕೆ ಬೇಕಾದ ಸೂಕ್ತ ರಕ್ಷಣಾ ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆಗಳಿಲ್ಲ ಎಂಬ ದೂರು ಮೊದಲಿನಿಂದಲೂ ಇದೆ. ಈ ಕಾರಣಕ್ಕೆ ಹಲವು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಲಯನ್‌ ಏರ್‌ನ ಪಟ್ಟಿಯೇ ದೊಡ್ಡದಿದೆ.

ಲಯನ್‌ ಏರ್‌ ವಿಮಾನ ದರಗಳು ಕನಿಷ್ಠವಾಗಿದ್ದು ಈ ಕಾರಣಕ್ಕೆ ಹೆಚ್ಚಿನ ಜನರು ಇವುಗಳಲ್ಲೇ ಓಡಾಡುತ್ತಾರೆ. ಆದರೆ ಇತ್ತೀಚೆಗೆ ಹಲವು ಬಾರಿ ಈ ಸಂಸ್ಥೆಯ ವಿಮಾನಗಳು ಅಪಘಾತಕ್ಕೀಡಾಗಿದೆ. ಕಳೆದ ವರ್ಷ ಇದೇ ಸಂಸ್ಥೆಗೆ ಸೇರಿದ ಬೋಯಿಂಗ್‌ ವಿಮಾನದ ರೆಕ್ಕೆಗಳು ಕೌಲಾನಾಮು ವಿಮಾನ ನಿಲ್ದಾಣದಲ್ಲಿ ಬೇರೊಂದು ವಿಮಾನದ ರೆಕ್ಕೆಗಳಿಗೆ ಬಡಿದಿತ್ತು. ಜಕಾರ್ತದ ಸುಕರ್ನೋ ಹಟ್ಟಾ ವಿಮಾನ ನಿಲ್ದಾಣದಲ್ಲಿ 2016ರ ಮೇನಲ್ಲಿ ಲಯನ್‌ ಏರ್‌ನ ಎರಡು ವಿಮಾನಗಳು ಡಿಕ್ಕಿಯಾಗಿದ್ದವು. 2016ರಲ್ಲಿ ಸಂಸ್ಥೆಯ ವಿಮಾನದ ಪೈಲಟ್‌ ಒಬ್ಬ ರನ್‌ವೇ ಬಿಟ್ಟು ವಿಮಾನ ಓಡಿಸಿ ಅದನ್ನು ಸಮುದ್ರಕ್ಕೆ ಬೀಳುವಂತೆ ಮಾಡಿದ್ದ. ಬಾಲಿಯಲ್ಲಿ ನಡೆದ ಈ ಘಟನೆಯಲ್ಲಿ ವಿಮಾನವೇ ಎರಡು ಹೋಳಾಗಿತ್ತು. ಹೀಗೊಂದು ಸುದೀರ್ಘ ಅಪಘಾತಗಳ ದಾಖಲೆಯನ್ನು ಹೊಂದಿರುವ ‘ಲಯನ್‌ ಏರ್‌’ನ ಇದೀಗ 189 ಜನರ ಪ್ರಾಣಕ್ಕೆ ಎರವಾಗಿದೆ.

ಚಿತ್ರ: ಸಾಂದರ್ಭಿಕ (2016ರಲ್ಲಿ ಬಾಲಿಯಲ್ಲಿ ನಡೆದ ಅಪಘಾತ)