ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸಾಫ್ಟ್‌ ಹಿಂದುತ್ವ; ರಾಹುಲ್‌ ಗಾಂಧಿ ಗೋತ್ರ ಕೇಳಿದ ಬಿಜೆಪಿ
ಸುದ್ದಿ ಸಾರ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸಾಫ್ಟ್‌ ಹಿಂದುತ್ವ; ರಾಹುಲ್‌ ಗಾಂಧಿ ಗೋತ್ರ ಕೇಳಿದ ಬಿಜೆಪಿ

ಚುನಾವಣೆ ಸಂದರ್ಭದಲ್ಲಿ ಹಿಂದುತ್ವದ ದಾಳ ತಮ್ಮದು ಮಾತ್ರ ಎಂದುಕೊಂಡಿದ್ದ ಬಿಜೆಪಿ, ಕಾಂಗ್ರೆಸ್‌ನ ಸಾಫ್ಟ್‌ ಹಿಂದುತ್ವದಿಂದ ಸ್ವಲ್ಪ ಡಿಸ್ಟರ್ಬ್‌ ಆದಂತಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸಾಫ್ಟ್‌ ಹಿಂದುತ್ವವನ್ನು ಜರೆಯಲು ಮತ್ತೆ ಬಿಜೆಪಿ ಮುಂದಾಗಿದೆ. ರಾಹುಲ್‌ ಗಾಂಧಿ ಗೋತ್ರ ಯಾವುದು ಎಂದು ಕೇಳಿರುವ ಬಿಜೆಪಿ, ರಾಹುಲ್‌ ಯಾವ ರೀತಿಯ ಜನಿವಾರ ಧರಿಸುತ್ತಾರೆ ಎಂದು ಪ್ರಶ್ನಿಸಿದೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಿರುವ ರಾಹುಲ್‌ ಸೋಮವಾರ ಉಜ್ಜೈನಿಯ ಮಹಾಕಾಳೇಶ್ವರ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಚುನಾವಣೆಯಲ್ಲೂ ರಾಹುಲ್‌ ಸಾಫ್ಟ್‌ ಹಿಂದುತ್ವ ಪ್ರಯೋಗಕ್ಕೆ ಮುಂದಾಗಿದ್ದರೆ, ಬಿಜೆಪಿ ಇದೇ ವಿಚಾರವಾಗಿ ರಾಹುಲ್ ಹಣಿಯಲು ಯತ್ನಿಸುತ್ತಿದೆ.

ಗುಜರಾತ್‌ನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್‌ ಮುಖಂಡ ರಂದೀಪ್‌ ಸುರ್ಜೇವಾಲ, “ರಾಹುಲ್‌ ಗಾಂಧಿ ಜನಿವಾರಧಾರಿ ಬ್ರಾಹ್ಮಣ” ಎಂದು ಹೇಳಿದ್ದರು. ಆ ಹೇಳಿಕೆಯನ್ನೇ ಇಟ್ಟುಕೊಂಡು ಈಗ ರಾಹುಲ್‌ ಕಾಲೆಳೆಯಲು ಬಿಜೆಪಿ ಮುಂದಾಗಿದೆ.

“ರಾಹುಲ್‌ ಗಾಂಧಿ ಒಂದು ಜನಿವಾರ ಧರಿಸುತ್ತಾರೆ. ಉಜ್ಜೈನಿಗೆ ಭೇಟಿ ನೀಡುತ್ತಿರುವ ರಾಹುಲ್‌ ಯಾವ ರೀತಿಯ ಜನಿವಾರಧಾರಿ?, ಅವರ ಗೋತ್ರ ಯಾವುದು?” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ಗುಜರಾತ್‌ನ ಸೋಮನಾಥ ದೇಗುಲಕ್ಕೆ ರಾಹುಲ್‌ ಭೇಟಿ ನೀಡಿದ್ದನ್ನು ಬಿಜೆಪಿ ಮುಖಂಡರು ಅಣಕಿಸಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್, “ನಾನು ಶಿವ ಭಕ್ತ. ಬಿಜೆಪಿಯವರು ಏನೇ ಹೇಳಿಕೊಳ್ಳಲಿ, ನಾನು ಸತ್ಯದಲ್ಲಿ ನಂಬಿಕೆ ಇರುವವನು” ಎಂದಿದ್ದರು.

ಭಾನುವಾರ ಶಶಿ ತರೂರ್ ಹೇಳಿಕೆಯಿಂದ ಎದ್ದಿದ್ದ ವಿವಾದಕ್ಕೂ ರಾಹುಲ್‌ ಗಾಂಧಿಯನ್ನು ಎಳೆತಂದಿದ್ದ ಬಿಜೆಪಿ, “ಶಿವ ಭಕ್ತ ರಾಹುಲ್ ಶಶಿ ತರೂರ್‌ ಹೇಳಿಕೆಗೆ ಕ್ಷಮೆ ಕೋರಬೇಕು” ಎಂದು ಒತ್ತಾಯಿಸಿತ್ತು. ಚುನಾವಣೆ ಸಂದರ್ಭದಲ್ಲಿ ಹಿಂದುತ್ವದ ದಾಳ ತಮ್ಮದು ಮಾತ್ರ ಎಂದುಕೊಂಡಿದ್ದ ಬಿಜೆಪಿ, ಕಾಂಗ್ರೆಸ್‌ನ ಸಾಫ್ಟ್‌ ಹಿಂದುತ್ವದಿಂದ ಸ್ವಲ್ಪ ಡಿಸ್ಟರ್ಬ್‌ ಆದಂತಿದೆ.