‘ಶಬರಿಮಲೆಯಲ್ಲಿ ರಕ್ತ ಚೆಲ್ಲಲು ಸಿದ್ಧವಾಗಿರಿ’ ಎಂದಿದ್ದ ರಾಹುಲ್‌ ಈಶ್ವರ್ ಬಂಧನ
ಸುದ್ದಿ ಸಾರ

‘ಶಬರಿಮಲೆಯಲ್ಲಿ ರಕ್ತ ಚೆಲ್ಲಲು ಸಿದ್ಧವಾಗಿರಿ’ ಎಂದಿದ್ದ ರಾಹುಲ್‌ ಈಶ್ವರ್ ಬಂಧನ

ರಾಹುಲ್‌ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯೇ ಶಬರಿಮಲೆಯಲ್ಲಿ ದೊಡ್ಡ ಹಿಂಸಾಚಾರಕ್ಕೆ ಕಾರಣ ಎಂದು ತಿರುವನಂತಪುರ ನಿವಾಸಿಯೊಬ್ಬರು ದೂರು ನೀಡಿದ್ದರು.

ಶಬರಿಮಲೆ ವಿಚಾರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಹಿಂದೂ ಕಾರ್ಯಕರ್ತ, ಶಬರಿಮಲೆ ಉಳಿಸಿ ಅಭಿಯಾನದ ಮುಖ್ಯ ಸಂಘಟಕ ರಾಹುಲ್‌ ಈಶ್ವರ್‌ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಶಬರಿಮಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ರಾಹುಲ್‌ ಮೇಲಿದೆ. ರಾಹುಲ್‌ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯೇ ಶಬರಿಮಲೆಯಲ್ಲಿ ದೊಡ್ಡ ಹಿಂಸಾಚಾರಕ್ಕೆ ಕಾರಣ ಎಂದು ತಿರುವನಂತಪುರ ನಿವಾಸಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ರಾಹುಲ್‌ನನ್ನು ಬಂಧಿಸಿದ್ದಾರೆ.

Also read: ಬಿಜೆಪಿ ರಾಜಕೀಯಕ್ಕೆ ಅಯ್ಯಪ್ಪನ ಬಳಕೆ; ಕೇರಳ ಪ್ರವೇಶಕ್ಕೆ ಶಬರಿಮಲೆ ‘ಮಾರ್ಗ’

“ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಮಹಿಳೆಯರು ಪ್ರವೇಶಿಸಿದ್ದೇ ಆದರೆ ಅಯ್ಯಪ್ಪ ದೇಗುಲದಲ್ಲಿ ಕೈ ಕುಯ್ದುಕೊಂಡು ರಕ್ತ ಹರಿಸಲು ಸಿದ್ಧರಿರಿ” ಎಂದು ರಾಹುಲ್‌ ಕೊಚ್ಚಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಭಕ್ತರಿಗೆ ಕರೆ ಕೊಟ್ಟಿದ್ದ ಆರೋಪವಿದೆ.

ಶಬರಿಮಲೆ ಅರ್ಚಕರ ತಳಮನ್‌ ಕುಟುಂಬಕ್ಕೆ ಸೇರಿದ ರಾಹುಲ್‌ ಕೇರಳದಲ್ಲಿ ಶಬರಿಮಲೆ ಉಳಿಸಿ ಅಭಿಯಾನ ಸಂಘಟಿಸಿದ್ದ. ಸುಪ್ರೀಂಕೋರ್ಟ್‌ ತೀರ್ಪು ವಿರೋಧಿಸಿ ಇದೇ ಅಭಿಯಾನದಡಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆದ ದಿನದಿಂದಲೇ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಹಿಂಸಾಚಾರ ಆರಂಭವಾಗಿತ್ತು. ಶಬರಿಮಲೆ ಹಿಂಸಾಚಾರ ಸಂಬಂಧ ಕೇರಳ ಪೊಲೀಸರು ಈವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!