samachara
www.samachara.com
ಜಮ್ಮು- ಕಾಶ್ಮೀರದಲ್ಲಿ ಕಲ್ಲು ತೂರುತ್ತಿರುವವರು ಭಯೋತ್ಪಾದಕರ ಕಾಲಾಳುಗಳು: ಬಿಪಿನ್‌ ರಾವತ್
ಸುದ್ದಿ ಸಾರ

ಜಮ್ಮು- ಕಾಶ್ಮೀರದಲ್ಲಿ ಕಲ್ಲು ತೂರುತ್ತಿರುವವರು ಭಯೋತ್ಪಾದಕರ ಕಾಲಾಳುಗಳು: ಬಿಪಿನ್‌ ರಾವತ್

“ಕಲ್ಲು ತೂರಾಟ ನಡೆಸುವುದರಿಂದ ಯಾರಿಗೂ ಉಪಯೋಗವಿಲ್ಲ. ಕಲ್ಲು ತೂರಾಟ ನಡೆಸುತ್ತಿರುವವರನ್ನೂ ಸೇನೆ ಹಗುರವಾಗಿ ಪರಿಗಣಿಸಿಲ್ಲ” ಎಂದಿದ್ದಾರೆ ರಾವತ್‌.

ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದಿಂದ ಯೋಧ ರಾಜೇಂದ್ರ ಸಿಂಗ್‌ ಮೃತಪಟ್ಟ ಬೆನ್ನಲ್ಲೇ, “ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುತ್ತಿರುವವರು ಭಯೋತ್ಪಾದಕರ ಜತೆ ನಂಟಿರುವವರು” ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಇನ್‌ಫೆಂಟ್ರಿ ದಿನದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್‌, “ಕಲ್ಲು ತೂರಾಟ ನಡೆಸುತ್ತಿರುವವರು ಭಯೋತ್ಪಾದಕರ ಕಾಲಾಳುಗಳು. ಅವರನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ” ಎಂದಿದ್ದಾರೆ.

ಜಮ್ಮು– ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಗುರುವಾರ ಯುವಕರ ಗುಂಪು ನಡೆಸಿದ ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ರಾಜೇಂದ್ರ ಸಿಂಗ್‌ ಶುಕ್ರವಾರ ಶ್ರೀನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

“ಗಡಿಯಲ್ಲಿನ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುವುದನ್ನು ನಿಲ್ಲಿಸದಿದ್ದರೆ ಭಾರತೀಯ ಸೇನೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ” ಎಂದು ರಾವತ್‌ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

“ಕಲ್ಲು ತೂರಾಟ ನಡೆಸುವುದರಿಂದ ಯಾರಿಗೂ ಉಪಯೋಗವಿಲ್ಲ. ಕಲ್ಲು ತೂರಾಟ ನಡೆಸುತ್ತಿರುವವರನ್ನೂ ಸೇನೆ ಹಗುರವಾಗಿ ಪರಿಗಣಿಸಿಲ್ಲ” ಎಂದು ರಾವತ್‌ ತಿಳಿಸಿದ್ದಾರೆ.