samachara
www.samachara.com
ಸಿಬಿಐ ಬೆಳವಣಿಗೆಗಳ ತನಿಖೆಯ ಉಸ್ತುವಾರಿಗೆ ಎ.ಕೆ. ಪಟ್ನಾಯಕ್‌; ಯಾರಿವರು?
ಸುದ್ದಿ ಸಾರ

ಸಿಬಿಐ ಬೆಳವಣಿಗೆಗಳ ತನಿಖೆಯ ಉಸ್ತುವಾರಿಗೆ ಎ.ಕೆ. ಪಟ್ನಾಯಕ್‌; ಯಾರಿವರು?

2ಜಿ ತರಂಗಾಂತರ ಹಗರಣ ಸೇರಿದಂತೆ ಹಲವು ಪ್ರಕರಣಗಳನ್ನು ನಿಭಾಯಿಸಿದ್ದ ಎ.ಕೆ. ಪಟ್ನಾಯಕ್‌ ಅವರಿಗೆ ಸಿವಿಸಿ ತನಿಖೆ ಉಸ್ತುವಾರಿಯ ಬವಾಬ್ದಾರಿ ಹೊರಿಸಲಾಗಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ಸಿವಿಸಿ ತನಿಖೆಯ ಉಸ್ತುವಾರಿ ಹೊಣೆಯನ್ನು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅನಂಗ ಕುಮಾರ್‌ ಪಟ್ನಾಯಕ್ (ಎ. ಕೆ. ಪಟ್ನಾಯಕ್‌) ಅವರಿಗೆ ವಹಿಸಿದೆ. 2ಜಿ ತರಂಗಾಂತರ ಹಗರಣ, ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸೌಮಿತ್ರ ಸೇನ್‌ ವಾಗ್ದಂಡನೆ ಪ್ರಕರಣಗಳನ್ನು ನಿಭಾಯಿಸಿದ್ದ ಎ.ಕೆ. ಪಟ್ನಾಯಕ್‌ ಅವರಿಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ.

ಒಡಿಶಾ ಮೂಲದ ಪಟ್ನಾಯಕ್‌ ಹುಟ್ಟಿದ್ದು 1949ರ ಜೂನ್‌ 3ರಂದು. ಉದ್ಯಮಿ ಗೋಪಾಲ್‌ ಚಂದ್ರ ಪಟ್ನಾಯಕ್‌ ಮತ್ತು ಶಾಂತಿಲತಾ ಪಟ್ನಾಯಕ್‌ ಅವರ ಪುತ್ರ ಎ.ಕೆ. ಪಟ್ನಾಯಕ್. ದೆಹಲಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಆಯ್ದುಕೊಂಡಿದ್ದು ಕಾನೂನು ವಿದ್ಯಾಭ್ಯಾಸವನ್ನು. ಕಟಕ್‌ನ ಮಧುಸೂದನ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.

1974ರಲ್ಲಿ ಒಡಿಶಾದಲ್ಲಿ ವಕೀಲಿಕೆ ಆರಂಭಿಸಿದ ಎ.ಕೆ. ಪಟ್ನಾಯಕ್‌, ಒಡಿಶಾ ಹೈಕೋರ್ಟ್‌ ಹಾಗೂ ಸ್ಥಳೀಯ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಿದರು. ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲೂ ಪಟ್ನಾಯಕ್‌ ವಾದ ಮಂಡಿಸಿದ್ದರು.

1994ರ ಜನವರಿ 13ರಂದು ಒಡಿಶಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದ ಅವರು, ಅದೇ ವರ್ಷ ಫೆಬ್ರುವರಿ 7ರಂದು ಗುವಾಹಟಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ವರ್ಗಾವಣೆಗೊಂಡರು.

2005ರಲ್ಲಿ ಛತ್ತೀಸ್‌ಗಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅದೇ ವರ್ಷದ ಕೊನೆಗೆ ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡು ನಾಲ್ಕು ವರ್ಷ ಸೇವೆ ಸಲ್ಲಿದರು. 2009ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2014ರ ಜೂನ್‌ 2ರಂದು ನಿವೃತ್ತರಾದರು.

ಕೇವಲ ನ್ಯಾಯಮೂರ್ತಿಯಾಗಿ ಮಾತ್ರವಲ್ಲ ನ್ಯಾಯಾಂಗಕ್ಕೆ ಸಂಬಂಧಿಸಿದ ಹಲವು ಸಮಿತಿಗಳಲ್ಲಿ ಎ. ಕೆ. ಪಟ್ನಾಯಕ್‌ ಇದ್ದರು. ಅವರು ಸುಪ್ರೀಂಕೋರ್ಟ್‌ನ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಸೌಮಿತ್ರ ಸೇನ್‌ ವಾಗ್ದಂಡನೆ ಪ್ರಕರಣದ ಆಂತರಿಕ ಸಮಿತಿ ಸದಸ್ಯರಾಗಿದ್ದರು.

2013ರಲ್ಲಿ 2ಜಿ ತರಂಗಾಂತರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎಚ್‌. ಕಪಾಡಿಯ ರಚಿಸಿದ ದ್ವಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಜಿ.ಎಸ್‌. ಸಿಂಘ್ವಿ ಜತೆಗೆ ಎ.ಕೆ. ಪಟ್ನಾಯಕ್‌ ಅವರೂ ಇದ್ದರು.

ನ್ಯಾಯಾಂಗದ ಗಟ್ಟಿಕಾಳು ಎನ್ನಲಾಗುತ್ತಿರುವ ಎ.ಕೆ. ಪಟ್ನಾಯಕ್‌ ಅವರ ಹೆಗಲಿಗೆ ಈಗ ಸಿವಿಸಿ ತನಿಖೆ ಉಸ್ತುವಾರಿಯ ಹೊಣೆ ಬಿದ್ದಿದೆ. ಅವರ ಉಸ್ತುವಾರಿಯಲ್ಲಿ ಸಿವಿಸಿ ತನಿಖೆ ಹೇಗೆ ನಡೆಯಲಿದೆ ಎಂಬುದು ಇನ್ನೆರಡು ವಾರಗಳಲ್ಲಿ ಗೊತ್ತಾಗಲಿದೆ.