ಎಎಪಿಯ 27 ಶಾಸಕರಿಗೆ ರಾಷ್ಟ್ರಪತಿ ಅಭಯ, 18 ಎಐಎಡಿಎಂಕೆ ಶಾಸಕರಿಗೆ ಮದ್ರಾಸ್‌ ಹೈಕೋರ್ಟ್‌ ಎಳ್ಳುನೀರು
ಸುದ್ದಿ ಸಾರ

ಎಎಪಿಯ 27 ಶಾಸಕರಿಗೆ ರಾಷ್ಟ್ರಪತಿ ಅಭಯ, 18 ಎಐಎಡಿಎಂಕೆ ಶಾಸಕರಿಗೆ ಮದ್ರಾಸ್‌ ಹೈಕೋರ್ಟ್‌ ಎಳ್ಳುನೀರು

‘ಲಾಭದಾಯಕ ಹುದ್ದೆ’ ಹೊಂದಿದ ಆರೋಪದ ಮೇಲೆ ಎಎಪಿಯ 27 ಶಾಸಕರನ್ನು ವಜಾಗೊಳಿಸುವಂತೆ ಕೋರಲಾಗಿದ್ದ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಗುರುವಾರ ಎರಡು ಪ್ರಮುಖ ತೀರ್ಮಾನಗಳು ಹೊರ ಬಿದ್ದಿವೆ. ಅದರಲ್ಲಿ ಒಂದು ದೆಹಲಿಗೆ ಸಂಬಂಧಿಸಿದ್ದು, ಇನ್ನೊಂದು ತಮಿಳುನಾಡಿನದ್ದು.

ದೆಹಲಿಯ ಬೆಳವಣಿಗೆಯಲ್ಲಿ, 27 ಎಎಪಿ ಶಾಸಕರು ‘ಲಾಭದಾಯಕ ಹುದ್ದೆ’ ಹೊಂದಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ 2016ರ ಜೂನ್‌ನಲ್ಲಿ ದೂರು ಸಲ್ಲಿಸಲಾಗಿತ್ತು. ಆದರೆ ಇದನ್ನು ಆಯೋಗ ತಿರಸ್ಕರಿಸಿದ್ದರಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ 27 ಶಾಸಕರನ್ನು ವಜಾಗೊಳಿಸುವಂತೆ ಕೋರಲಾಗಿದ್ದ ಅರ್ಜಿಯನ್ನು ರಾಷ್ಟ್ರಪತಿಗಳೂ ತಿರಸ್ಕರಿಸುವುದರೊಂದಿಗೆ ಶಾಸಕರು ನಿರಾಳರಾಗಿದ್ದಾರೆ.

ದೆಹಲಿಯ ವಿವಿಧ ಆಸ್ಪತ್ರೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ‘ರೋಗಿ ಕಲ್ಯಾಣ್‌ ಸಮಿತಿ’ಯನ್ನು ಸ್ಥಳೀಯ ಮಟ್ಟದಲ್ಲಿ ರಚನೆ ಮಾಡಲಾಗಿರುತ್ತದೆ. ಇದಕ್ಕೆ ಅಲ್ಲಿನ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಇದು ಶಾಸಕರಿಗೆ ಸಿಕ್ಕಿದ ಲಾಭದಾಯಕ ಹುದ್ದೆ ಎಂದು ದೂರುದಾರರು ಆರೋಪಿಸಿದ್ದರು. ಈ ಕಾರಣಕ್ಕೆ ಅವರುಗಳನ್ನು ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ರಾಷ್ಟ್ರಪತಿಗಳು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದ್ದರು. ಇದೀಗ ಚುನಾವಣಾ ಆಯೋಗ ದೂರಿನಲ್ಲಿ ಯಾವುದೇ ಹುರುಳು ಇಲ್ಲ ಎಂದು ವರದಿ ನೀಡಿದ ಹಿನ್ನಲೆಯಲ್ಲಿ ರಾಷ್ಟ್ರಪತಿಗಳು ಮನವಿಯನ್ನು ತಿರಸ್ಕರಿಸಿದ್ದಾರೆ.

ಇನ್ನು ಏಪ್ರಿಲ್‌ 26ರಂದು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ, ‘ರೋಗಿ ಕಲ್ಯಾಣ ಸಮಿತಿ’ ಆರೋಗ್ಯ ಸೌಲಭ್ಯಗಳು, ಅವುಗಳ ಅಭಿವೃದ್ಧಿ, ಈ ಬಗೆಗಿನ ನೀತಿ ನಿರೂಪಣೆಗಳಲ್ಲಿ ಸಲಹೆಗಳನ್ನು ನೀಡುತ್ತದೆ. ಪ್ರತಿ ರೋಗಿ ಕಲ್ಯಾಣ ಸಮಿತಿಗೂ ಇದಕ್ಕಾಗಿ ವರ್ಷಕ್ಕೆ ಕೇವಲ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಹೇಳಿತ್ತು. ಇದು ಎನ್‌ಜಿಒ ರೀತಿಯ ಸಂಸ್ಥೆಯಾಗಿದ್ದರಿಂದ ಇದು ಲಾಭದಾಯಕ ಹುದ್ದೆಯಡಿಯಲ್ಲಿ ಬರುವುದಿಲ್ಲ ಎಂಬ ತೀರ್ಮಾನಕ್ಕೆ ಆಯೋಗ ಬಂದಿದೆ.

18 ಎಐಎಡಿಎಂಕೆ ಶಾಸಕರು ಅನರ್ಹ

ಮತ್ತೊಂದು ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ತೀರ್ಮಾನವನ್ನು ಎತ್ತಿ ಹಿಡಿದಿದೆ. ಇದರಿಂದ 18 ಎಐಎಡಿಎಂಕೆ ಶಾಸಕರು ವಜಾಗೊಂಡಿದ್ದಾರೆ. ಈ ತೀರ್ಪಿನೊಂದಿಗೆ ಎಡಪ್ಪಾಡಿ ಪಳನಿಸ್ವಾಮಿ ಸರಕಾರ ಗಂಡಾಂತರದಿಂದ ಪಾರಾಗಿದೆ.

ಉಚ್ಛಾಟಿತ ಎಐಎಡಿಎಂಕೆ ಶಾಸಕ ಟಿಟಿವಿ ದಿನಕರನ್‌ ಬಣಕ್ಕೆ ಸೇರಿದ 18 ಶಾಸಕರನ್ನು ಸ್ಪೀಕರ್‌ 2017ರ ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿದ್ದರು. ವಿಶ್ವಾಸಮತಯಾಚನೆ ವೇಳೆ ಎಐಎಡಿಎಂಕೆಯ ಮುಖ್ಯಮಂತ್ರಿಗೆ ಮತ ಹಾಕದೇ ಇದ್ದ ಕಾರಣಕ್ಕೆ ಅವರುಗಳನ್ನು ವಜಾಗೊಳಿಸುವಂತೆ ಪಕ್ಷ ಸ್ಪೀಕರ್‌ಗೆ ಪತ್ರ ಬರೆದಿತ್ತು. ಅದರ ಆಧಾರದ ಮೇಲೆ ಶಾಸಕತ್ವವನ್ನು ರದ್ದುಗೊಳಿಸುವ ತೀರ್ಮಾನವನ್ನು ಸಭಾಧ್ಯಕ್ಷರು ತೆಗೆದುಕೊಂಡಿದ್ದರು.

ಈ ತೀರ್ಮಾನವನ್ನು ಪ್ರಶ್ನಿಸಿ ಶಾಸಕರು ಕೋರ್ಟ್‌ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಗಸ್ಟ್‌ 31ರಂದು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡಿದ ನ್ಯಾಯಾಲಯ ಸ್ಪೀಕರ್‌ ತೀರ್ಮಾನವನ್ನು ಎತ್ತಿ ಹಿಡಿದಿದೆ. ಇದರಿಂದ 18 ಜನರು ಶಾಸಕತ್ವ ಕಳೆದುಕೊಂಡಿದ್ದಾರೆ. ಜತೆಗೆ ತಮಿಳುನಾಡು ವಿಧಾನಸಭೆಯ ಸದಸ್ಯಬಲ 215ಕ್ಕೆ ಕುಸಿದಿದೆ. ಸದ್ಯ ಬಹುಮತಕ್ಕೆ 108 ಸ್ಥಾನಗಳು ಅಗತ್ಯವಾಗಿವೆ.

ಹಾಲಿ ಪಳನಿಸ್ವಾಮಿ ಸರಕಾರ ಇಷ್ಟು ಸಂಖ್ಯಾಬಲವನ್ನು ಹೊಂದಿದ್ದು ಸರಕಾರ ಭದ್ರವಾಗಿದೆ. ಒಂದೊಮ್ಮೆ ಇಂದು ನ್ಯಾಯಾಲಯ ಅನರ್ಹತೆಯನ್ನು ರದ್ದುಗೊಳಿಸಿದ್ದರೆ ಸರಕಾರ ಬೀಳುವ ಅಪಾಯವಿತ್ತು. ಸದ್ಯ ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 20 ಸ್ಥಾನಗಳು ಖಾಲಿಯಾಗಿದ್ದು ಈ ಸ್ಥಾನಗಳಿಗೆ ತಕ್ಷಣ ಚುನಾವಣೆ ನಡೆಯಬೇಕು ಎಂದು ವಿರೋಧ ಪಕ್ಷ ಡಿಎಂಕೆ ಆಗ್ರಹಿಸಿದೆ.