ಪಿಎನ್‌ಬಿ ಹಗರಣ; ನೀರವ್‌ ಮೋದಿಯ 255 ಕೋಟಿ ರೂ. ಹಾಂಗ್‌ಕಾಂಗ್‌ ಆಸ್ತಿ ಪ್ರಕರಣಕ್ಕೆ ಸೇರ್ಪಡೆ
ಸುದ್ದಿ ಸಾರ

ಪಿಎನ್‌ಬಿ ಹಗರಣ; ನೀರವ್‌ ಮೋದಿಯ 255 ಕೋಟಿ ರೂ. ಹಾಂಗ್‌ಕಾಂಗ್‌ ಆಸ್ತಿ ಪ್ರಕರಣಕ್ಕೆ ಸೇರ್ಪಡೆ

ನೀರವ್‌ ಮೋದಿಯ ಹಾಂಗ್‌ಕಾಂಗ್‌ ಆಸ್ತಿಯನ್ನು ವಂಚನೆ ಪ್ರಕರಣಕ್ಕೆ ಸೇರಿಸಲು ಅಕ್ರಮ ಹಣಕಾಸು ವಹಿವಾಟು ನಿಯಂತ್ರಣ ಕಾಯ್ದೆಯಡಿ ಇ.ಡಿ. ಪ್ರಾಥಮಿಕ ಆದೇಶ ಹೊರಡಿಸಿದೆ.

ನೀರವ್‌ ಮೋದಿಗೆ ಸೇರಿದ ಹಾಂಗ್‌ಕಾಂಗ್‌ನಲ್ಲಿರುವ ಸುಮಾರು 255 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಹಾಗೂ ಆಭರಣಗಳನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸೇರ್ಪಡೆ ಮಾಡಲು ಜಾರಿ ನಿರ್ದೇಶನಾಲಯ (ಇ.ಡಿ) ಮುಂದಾಗಿದೆ.

ನೀರವ್‌ ಮೋದಿಯ ಹಾಂಗ್‌ಕಾಂಗ್‌ ಆಸ್ತಿಯನ್ನು ವಂಚನೆ ಪ್ರಕರಣಕ್ಕೆ ಸೇರಿಸಲು ಅಕ್ರಮ ಹಣಕಾಸು ವಹಿವಾಟು ನಿಯಂತ್ರಣ ಕಾಯ್ದೆಯಡಿ ಇ.ಡಿ. ಪ್ರಾಥಮಿಕ ಆದೇಶ ಹೊರಡಿಸಿದೆ.

“ನೀರವ್‌ ಮೋದಿ ವಿರುದ್ಧ ವಂಚನೆ ಪ್ರಕರಣ ದಾಖಲಾದ ಬಳಿಕ ಮೋದಿಗೆ ಸೇರಿದ ದುಬೈ ಕಂಪನಿಯಿಂದ ಬೆಲೆಬಾಳುವ ವಸ್ತುಗಳು ಹಾಗೂ ಆಭರಣಗಳನ್ನು ಮೋದಿಯ ಹಾಂಗ್‌ಕಾಂಗ್‌ನ ಕಂಪನಿಗೆ 26 ಶಿಪ್‌ಮೆಂಟ್‌ಗಳ ಮೂಲಕ ಕಳಿಸಲಾಗಿದೆ” ಎಂದು ಇ.ಡಿ. ಹೇಳಿದೆ.

“ಈ ಬೆಲೆ ಬಾಳುವ ವಸ್ತುಗಳು, ಆಭರಣಗಳು, ವಜ್ರಗಳು ಸದ್ಯ ಹಾಂಗ್‌ಕಾಂಗ್‌ನ ಲಾಜಿಸ್ಟಿಕ್‌ ಕಂಪನಿಯೊಂದರ ಬಳಿ ಇವೆ. ಸದ್ಯ ಈ ಬೆಲೆ ಬಾಳುವ ವಸ್ತುಗಳ ನಿಖರ ಮೌಲ್ಯ ಹಾಗೂ ಮಾಲೀಕತ್ವದ ಬಗ್ಗೆ ಇನ್ನೂ ಪೂರ್ಣ ಮಾಹಿತಿ ಸಿಕ್ಕಿಲ್ಲ. ಈ ವಸ್ತುಗಳ ಮೌಲ್ಯ ಸುಮಾರು 255 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ” ಎಂದು ಇ.ಡಿ. ತಿಳಿಸಿದೆ.

ಹಾಂಗ್‌ಕಾಂಗ್‌ನ ಈ ಬೆಲೆ ಬಾಳುವ ವಸ್ತುಗಳೂ ಸೇರಿದರೆ ಇ.ಡಿ. ಈವರೆಗೆ ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸೇರಿಸಿದ ನೀರವ್‌ ಆಸ್ತಿ ಮೌಲ್ಯ 4,744 ಕೋಟಿ ರೂಪಾಯಿ ಆಗಲಿದೆ. ನೀರವ್‌ ಮೋದಿ ಹಾಗೂ ಮೆಹುಲ್‌ ಚೋಸ್ಕಿ ಸೇರಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸುವ ಹಣ 13,000 ಕೋಟಿ ರೂಪಾಯಿ.

ಭಾರತದಿಂದ ಪರಾರಿಯಾಗಿ ತಲೆ ಮರೆಸಿಕೊಂಡಿರುವ ನೀರವ್‌ ಮೋದಿ ಇಂಗ್ಲೆಂಡ್‌ನಲ್ಲಿದ್ದಾನೆ ಎನ್ನಲಾಗಿದೆ. ನೀರವ್‌ ಮೋದಿಯನ್ನು ಭಾರತಕ್ಕೆ ಕರೆತರಲು ಇಂಟರ್‌ಪೋಲ್‌ ವಾರಂಟ್‌ ಅನ್ನೂ ಹೊರಡಿಸಲಾಗಿದೆ. ಆದರೆ, ಬಹುಕೋಟಿ ವಂಚನೆ ಪ್ರಕರಣ ದಾಖಲಾದ ಬಳಿಕ ನೀರವ್‌ ಮೋದಿ ಪತ್ತೆಯಿಲ್ಲ.