ವಿಕೋಪ ಕಂಡ ಊರಲ್ಲಿ ಸ್ಥಳೀಯ ಚುನಾವಣೆ ಕಾವು; ಮುಂದಿದೆಯೇ ಅನಿರೀಕ್ಷಿತ ಫಲಿತಾಂಶ!
ಸುದ್ದಿ ಸಾರ

ವಿಕೋಪ ಕಂಡ ಊರಲ್ಲಿ ಸ್ಥಳೀಯ ಚುನಾವಣೆ ಕಾವು; ಮುಂದಿದೆಯೇ ಅನಿರೀಕ್ಷಿತ ಫಲಿತಾಂಶ!

ವಿಕೋಪದ ಕಾರಣಕ್ಕೆ ಮುಂದೂಡಲಾಗಿದ್ದ ಕೊಡಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೀಗ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಭೂಕುಸಿತದಿಂದಾಗಿ ಸಾವಿರಾರು ಜನರು ಸಂತ್ರಸ್ಥರಾಗಿದ್ದರು. ಇದೇ ವೇಳೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣಾ ಆಯೋಗ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಿತು. ಕೊಡಗಿನ ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯ್ತಿಗಳಿಗೆ ಕೂಡ ಸೆಪ್ಟೆಂಬರ್‌ನಲ್ಲೇ ಚುನಾವಣೆ ನಡೆಸಬೇಕಾಗಿತ್ತು. ಆದರೆ, ಕೊಡಗಿನ ದುರಂತದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿತ್ತು. ಇದೀಗ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದು, ಪ್ರಚಾರ ಅಂತಿಮ ಹಂತದಲ್ಲಿದೆ.

ಬಹುಶಃ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದು ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಸಜ್ಜಾಗಿವೆ. ಕುಶಾಲನಗರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿಯೇ ಸ್ಪರ್ಧೆಗೆ ಇಳಿದಿದ್ದಾರೆ.

ವೀರಾಜಪೇಟೆಯಲ್ಲಿ 18 ಸ್ಥಾನಗಳಿಗೆ 55 ಅಭ್ಯರ್ಥಿಗಳು ಕಣದಲ್ಲಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ 4 ಮತ್ತು 14 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಬಿಜೆಪಿಯು ಎಲ್ಲಾ 18 ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಈ ಪಂಚಾಯ್ತಿಯಲ್ಲಿ ಈಗ ಬಿಜೆಪಿ ಆಡಳಿತ ಇದ್ದು ಇದನ್ನು ಕೊನೆಗಾಣಿಸಲು ಎರಡೂ ಪಕ್ಷಗಳು ಪ್ರಯತ್ನ ನಡೆಸಿವೆ. ಕುಶಾಲನಗರದಲ್ಲಿ ಕೂಡ ಬಿಜೆಪಿಯೇ ಅಧಿಕಾರದಲ್ಲಿದ್ದು ಇಲ್ಲಿನ ಒಟ್ಟು 16 ವಾರ್ಡ್‌ಗಳಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

ಇನ್ನು ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯದ್ದು ಜಿಲ್ಲಾದ್ಯಂತ ಕುತೂಹಲ ಕೆರಳಿಸಿರುವ ಕಣವಾಗಿದೆ. ಇಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಒಂದಾಗಿದ್ದು ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ತೀವ್ರ ಪೈಪೋಟಿ ಒಡ್ಡಿವೆ. ಇಲ್ಲಿ ಒಟ್ಟು 11 ವಾರ್ಡ್‌ಗಳಿದ್ದು ಕಾಂಗ್ರೆಸ್ 6 ಮತ್ತು ಜೆಡಿಎಸ್ 5 ವಾರ್ಡ್‌ಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸುತ್ತಿವೆ. ಈ ಹಿಂದಿನ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವ ಮಾತುಕತೆ ನಡೆಸಿದ್ದರೂ ಅದು ಕೈಗೂಡಿರಲಿಲ್ಲ.

ಸೋಮವಾರಪೇಟೆಯು ಮೊದಲಿನಿಂದಲೂ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದು 2008ರ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ವಿಲೀನಗೊಂಡಿದೆ. ಇದು ಬಿಜೆಪಿಯ ಭದ್ರಕೋಟೆ. ಇಲ್ಲಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೂ ಸೋಮವಾರಪೇಟೆ ತಾಲ್ಲೂಕಿನವರೇ ಆಗಿದ್ದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯೂ ಅಗಿದೆ.

ಹಾಗೆ ನೋಡಿದರೆ ಬಿಜೆಪಿಯೇ ಎರಡು ದಶಕಗಳಿಂದ ಅಧಿಕಾರದಲ್ಲಿದ್ದರೂ ಇಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸಗಳೇನೂ ನಡೆದಿಲ್ಲ. ಜಿಲ್ಲೆಯಲ್ಲಿಯೇ ದೊಡ್ಡದಾದ ವಾಣಿಜ್ಯ ಸಂಕೀರ್ಣ ಕಟ್ಟಲಾಗಿದ್ದರೂ ಅವರ ಆದಾಯ ಸರಿಯಾಗಿ ಪಂಚಾಯ್ತಿಗೆ ಸೇರುತ್ತಿಲ್ಲ. ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರು ಅವನ್ನು ಒಳ ಬಾಡಿಗೆಗೆ ನೀಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ಮಳಿಗೆಗಳ ಆದಾಯದ ಅವ್ಯವಹಾರ ಇಲ್ಲಿ ನಡೆಯುತ್ತಿದೆ.

ಈ ವಿಚಾರ ಗೊತ್ತಿದ್ದರೂ ಪಂಚಾಯ್ತಿ ಜನಪ್ರತಿನಿಧಿಗಳು ಈ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಪಂಚಾಯ್ತಿಯಲ್ಲಿ ಇವತ್ತಿಗೂ ಕಸ ವಿಲೇವಾರಿಯ ಸಮಸ್ಯೆ ಬೃಹದಾಕಾರವಾಗಿದೆ. ಕಸ ವಿಲೇವಾರಿಗೆ ಸಮೀಪದ ಸಿದ್ದಲಿಂಗಪುರದಲ್ಲಿ ಭೂಮಿ ಖರೀದಿಸಿದೆ. ಆದರೆ, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಅಲ್ಲಿ ಗ್ರಾಮಸ್ಥರು ಕಸ ಹಾಕಲು ಬಿಡುತ್ತಿಲ್ಲ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೂ ಈ ಚುನಾವಣೆ ಮಹತ್ವದ್ದಾಗಿದೆ. ಈ ಕ್ಷೇತ್ರದ ಮತದಾರರು ಬಿಜೆಪಿ ಆಡಳಿತದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದು, ಈ ಬಾರಿ ಇಲ್ಲಿ ಅನಿರೀಕ್ಷಿತ ಫಲಿತಾಂಶ ಬಂದರೂ ಅಚ್ಚರಿಯೇನಿಲ್ಲ.